ಸಖರಾಯಪಟ್ಟಣ: ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಭ್ರಷ್ಟಾಚಾರ, ಪಿಂಚಣಿ ರದ್ದು ಹಾಗೂ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಖರಾಯಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಡವರು ಮತ್ತು ವಿದ್ಯಾರ್ಥಿಗಳ ಕಣ್ಣೀರು ಈ ಸರ್ಕಾರವನ್ನು ಸುಮ್ಮನೆ ಬಿಡಲಾರದು ಎಂದು ಎಚ್ಚರಿಸಿದರು.
ಜಾರ್ಖಂಡ್ನಲ್ಲಿ ಪರೀಕ್ಷಾ ಅಕ್ರಮ, ಉದ್ಯೋಗ ನೇಮಕಾತಿಯಲ್ಲಿ ವ್ಯಾಪಾರ ಹಾಗೂ ಭ್ರಷ್ಟಾಚಾರದ ವಿರುದ್ಧ ಯುವಕರು ಪ್ರತಿಭಟನೆ ನಡೆಸುತ್ತಿದ್ದು, ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಲಘುವಾಗಿ ಪರಿಗಣಿಸದೆ ತಕ್ಷಣ ಸಿಬಿಐ ತನಿಖೆಗೆ ಒಪ್ಪಿಸಿ, ಭ್ರಷ್ಟಾಚಾರ ಎಸಗಿದವರನ್ನು ಜೈಲಿಗೆ ಕಳುಹಿಸಬೇಕು ಎಂದು ಅವರು ಜಾರ್ಖಂಡ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಇದೇ ವೇಳೆ, ಕರ್ನಾಟಕದಲ್ಲೂ ಕೆಪಿಎಸ್ಸಿ ಸಂಸ್ಥೆಯು ಉದ್ಯೋಗ ನೇಮಕಾತಿ ಕಚೇರಿಯಾಗುವ ಬದಲು, ಹಣ ಹಾಗೂ ಜಾತಿಗೆ ಮಣೆ ಹಾಕುವ ಉದ್ಯೋಗ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು. ಕೆಪಿಎಸ್ಸಿ ಮತ್ತು ಜಾರ್ಖಂಡ್ ಹೋರಾಟದ ವಿಚಾರದಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಮೌನ ವಹಿಸುವ ಮೂಲಕ ಭ್ರಷ್ಟಾಚಾರಕ್ಕೆ ಸಮ್ಮತಿ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ಕಡೆಗಣಿಸಿದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಾಗಲಿ ಅಥವಾ ಜಾರ್ಖಂಡ್ನಲ್ಲಾಗಲಿ ಉಳಿಯುವುದಿಲ್ಲ ಎಂದರು.
ರಾಜ್ಯದ ಆಡಳಿತ ಸ್ಥಿತಿಯ ಕುರಿತು ಮಾತನಾಡಿದ ಅವರು, ಹಿರಿಯ ಕಾಂಗ್ರೆಸ್ ಶಾಸಕರೇ ಮಂತ್ರಿಗಿರಿಯನ್ನು ಭ್ರಷ್ಟರಿಗೆ ಹಂಚಲಾಗಿದೆ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಸಂಪುಟ ಖಾತೆ ಹಂಚುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ, ಹೈಕಮಾಂಡ್ ಬಹಿರಂಗವಾಗಿ ಪಟ್ಟಿ ಬಿಡುಗಡೆ ಮಾಡಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡುತ್ತಿದೆ ಎಂದು ಟೀಕಿಸಿದರು. ಇದಲ್ಲದೆ, ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಲು ವಿಳಂಬ ಮಾಡುತ್ತಿದೆ. ತಕ್ಷಣವೇ ಬರ ಘೋಷಿಸಿ, ಅಗತ್ಯವಿರುವ ಕಡೆ ಮೇವು ಬ್ಯಾಂಕ್ ತೆರೆಯಬೇಕು, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು ಮತ್ತು ಖಾಸಗಿ ಬೋರ್ವೆಲ್ಗಳನ್ನು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸರಿ ಸುಮಾರು 19 ಲಕ್ಷಕ್ಕೂ ಹೆಚ್ಚು ಜನರ ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲ ವೇತನಗಳನ್ನು ರದ್ದುಗೊಳಿಸಲಾಗಿದ್ದು, ಚಿಕ್ಕಮಗಳೂರು ಒಂದೇ ಜಿಲ್ಲೆಯಲ್ಲೇ 67,000 ಜನರ ಪಿಂಚಣಿ ತಡೆಹಿಡಿಯಲಾಗಿದೆ. ಬಿಪಿಎಲ್ ಕಾರ್ಡ್ಗೆ 1.2 ಲಕ್ಷ ರೂಪಾಯಿ ಆದಾಯ ಮಿತಿ ಇದ್ದರೆ, ವೃದ್ಧಾಪ್ಯ ವೇತನಕ್ಕೆ ಕೇವಲ 32,000 ರೂಪಾಯಿ ಮಿತಿ ಹೇರಿರುವುದು ಬಡವರಿಗೆ ಮಾಡಿದ ಘೋರ ಅವಮಾನವಾಗಿದೆ. ತಡೆಹಿಡಿದಿರುವ ಎಲ್ಲಾ ಪಿಂಚಣಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಪ್ರತಿ ಪಂಚಾಯತಿಯಲ್ಲಿ 'ಪಿಂಚಣಿ ಅದಾಲತ್' ನಡೆಸಿ ಬಡವರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.