ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಕೊನೆಗೂ ಎರಡನೇ ಹಂತದ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಮೊದಲ ಹಂತದ ಖಾತೆ ಹಂಚಿಕೆಯ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ ಹಾಗೂ ಕೃಷ್ಣ ಬೈರೇಗೌಡ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅದರಲ್ಲೂ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾಗ, ಪಕ್ಷದ ನಾಯಕರು ಅವರ ಮನವೊಲಿಸಿ ಅಧಿಕಾರ ವಹಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಅಸಮಾಧಾನಗೊಂಡಿದ್ದ ನಾಯಕರ ಬೇಡಿಕೆಗಳನ್ನು ಅತ್ಯಂತ ಲೆಕ್ಕಾಚಾರದಿಂದ ಅಳೆದುತೂಗಿ ಖಾತೆಗಳನ್ನು ಪುನರ್ ಹಂಚಿಕೆ ಮಾಡಲಾಗಿದೆ. ಮುಖ್ಯವಾಗಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ಆಹಾರ ಇಲಾಖೆಯನ್ನೇ ಮತ್ತೆ ನೀಡಿದ್ದಕ್ಕೆ ಅಸಮಾಧಾನಗೊಂಡು, ಸಮಾಜ ಕಲ್ಯಾಣ ಇಲಾಖೆಗೆ ಪಟ್ಟು ಹಿಡಿದು ಹೈಕಮಾಂಡ್ ಭೇಟಿಯಾಗಿದ್ದ ಕೆ.ಎಚ್. ಮುನಿಯಪ್ಪ ಅವರ ಬೇಡಿಕೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಮಣಿದಿದೆ. ಮುನಿಯಪ್ಪ ಅವರಿಗೆ ಅವರು ಕೇಳಿದ ಸಮಾಜ ಕಲ್ಯಾಣ ಇಲಾಖೆಯನ್ನು ವಹಿಸಲಾಗಿದ್ದು, ಹಿಂದೆ ಮುನಿಯಪ್ಪ ಅವರಿಗೆ ನೀಡಿದ್ದ ಆಹಾರ ಇಲಾಖೆಯನ್ನು ರಿಜ್ವಾನ್ ಅವರಿಗೆ ನೀಡಲಾಗಿದೆ. ಈ ಮೂಲಕ ಸಂಪುಟದೊಳಗಿನ ಬಂಡಾಯ ಶಮನಗೊಳಿಸಿ ಸರ್ಕಾರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಯಶಸ್ವಿಯಾಗಿದೆ.