image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಮ್ಮು-ಕಾಶ್ಮೀರ: ಓಮರ್ ಅಬ್ದುಲ್ಲಾ ಸರ್ಕಾರಕ್ಕೆ ಸಂಪುಟ ವಿಸ್ತರಣೆ ಧರ್ಮಸಂಕಟ

ಜಮ್ಮು-ಕಾಶ್ಮೀರ: ಓಮರ್ ಅಬ್ದುಲ್ಲಾ ಸರ್ಕಾರಕ್ಕೆ ಸಂಪುಟ ವಿಸ್ತರಣೆ ಧರ್ಮಸಂಕಟ

ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದಿದ್ದರೂ, ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರಿಗೆ ಸಂಪುಟ ವಿಸ್ತರಣೆಯು ಬಹುದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದೆ. ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪನೆ, ಉದ್ಯೋಗ ಸೃಷ್ಟಿ, ವಿದ್ಯುತ್ ಹಾಗೂ ದೈನಂದಿನ ಆಡಳಿತ ಸುಧಾರಣೆಯಂತಹ ಚುನಾವಣಾ ಭರವಸೆಗಳನ್ನು ಈಡೇರಿಸುವ ತೀವ್ರ ಒತ್ತಡದಲ್ಲಿರುವ ಸರ್ಕಾರಕ್ಕೆ, ಪಕ್ಷದೊಳಗಿನ ರಾಜಕೀಯ ಸಮೀಕರಣಗಳನ್ನು ನಿಭಾಯಿಸುವುದು ದೊಡ್ಡ 'ಧರ್ಮಸಂಕಟ' ತಂದೊಡ್ಡಿದೆ.

2019ರ ಜಮ್ಮು ಮತ್ತು ಕಾಶ್ಮೀರ ಪುನರ್ ರಚನಾ ಕಾಯ್ದೆಯ ಸೆಕ್ಷನ್ 53ರ ಪ್ರಕಾರ, ವಿಧಾನಸಭೆಯ ಒಟ್ಟು ಬಲದ ಶೇಕಡ 10ಕ್ಕಿಂತ ಹೆಚ್ಚು ಸಚಿವರು ಇರಬಾರದು. 90 ಸದಸ್ಯಬಲದ ಸಭೆಯಲ್ಲಿ ಗರಿಷ್ಠ 9 ಸಚಿವ ಸ್ಥಾನಗಳಿಗೆ ಮಾತ್ರ ಅವಕಾಶವಿದ್ದು, ಪ್ರಸ್ತುತ 6 ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ. 41 ಶಾಸಕರನ್ನು ಹೊಂದಿರುವ ನ್ಯಾಷನಲ್ ಕಾನ್ಫರೆನ್ಸ್‌ನಲ್ಲಿ (ಎನ್‌ಸಿ) ಹಲವರು ಸಚಿವ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಆದರೆ ಖಾಲಿ ಇರುವ ಮೂರು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿದರೆ, ಅವಕಾಶ ಸಿಗದ ಶಾಸಕರಲ್ಲಿ ಆಂತರಿಕ ಅಸಮಾಧಾನ ಭುಗಿಲೇಳುವ ಭೀತಿ ಎದುರಾಗಿದೆ.

ಮತ್ತೊಂದೆಡೆ ರಾಜಕೀಯ ಲೆಕ್ಕಾಚಾರಗಳನ್ನು ಮಿತ್ರಪಕ್ಷ ಕಾಂಗ್ರೆಸ್ ಮತ್ತಷ್ಟು ಜಟಿಲಗೊಳಿಸಿದೆ. 6 ಶಾಸಕರನ್ನು ಹೊಂದಿರುವ ಕಾಂಗ್ರೆಸ್, ರಾಜ್ಯದ ಸ್ಥಾನಮಾನ ಮರುಸ್ಥಾಪನೆಯಾಗುವವರೆಗೆ ಸಂಪುಟ ಸೇರುವುದಿಲ್ಲ ಎಂಬ ನಿಲುವು ತಳೆದು ಸರ್ಕಾರದಿಂದ ಹೊರಗುಳಿದಿದೆ. ಇದೇ ವೇಳೆ, ಶಾಸಕರಿಗೆ ಹಣ ಮತ್ತು ಮಂತ್ರಿಗಿರಿಯ ಆಮಿಷ ಒಡ್ಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಓಮರ್ ಆರೋಪಿಸಿದ್ದರೆ, ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿ ಮಾನನಷ್ಟ ನೋಟಿಸ್ ನೀಡಿದೆ. ಈ ಎಲ್ಲಾ ರಾಜಕೀಯ ಸಮೀಕರಣಗಳ ನಡುವೆ, ಶಾಸಕರ ಬಂಡಾಯಕ್ಕೆ ಅವಕಾಶ ನೀಡದೆ ಆಡಳಿತ ಯಂತ್ರವನ್ನು ಕಾಯ್ದುಕೊಳ್ಳಲು ಆಗಸ್ಟ್ 15ರ ಬಳಿಕ ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಓಮರ್ ನಿರ್ಧರಿಸಿದ್ದಾರೆ.

Category
ಕರಾವಳಿ ತರಂಗಿಣಿ