ಬೆಂಗಳೂರು : ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಅತಿಯಾದ ಹಸ್ತಕ್ಷೇಪವು ರಾಜ್ಯ ನಾಯಕರಲ್ಲಿ ತೀವ್ರ ಅಸಹನೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಸ್ಥಾನಪಲ್ಲಟಗೊಳಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ನೀಡಿದ ಬಳಿಕ, ವರಿಷ್ಠರು ಪ್ರತಿಯೊಂದು ನಿರ್ಧಾರದಲ್ಲೂ ನಿಯಂತ್ರಣ ಸಾಧಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸರ್ಕಾರದ ಪ್ರತಿ ಬೆಳವಣಿಗೆಯಲ್ಲೂ ದೆಹಲಿ ನಾಯಕರ ಮೇಲಾಟದಿಂದಾಗಿ ರಾಜ್ಯದ ಆಡಳಿತ ವ್ಯವಸ್ಥೆ ಹಳ್ಳ ಹಿಡಿಯುತ್ತಿದೆ ಎಂಬ ಟೀಕೆಗಳು ಪಕ್ಷದ ವಲಯದಲ್ಲೇ ವ್ಯಕ್ತವಾಗುತ್ತಿವೆ.
ನೂತನ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದ ನಂತರವಷ್ಟೇ ಸಂಪುಟ ವಿಸ್ತರಣೆಗೆ ಅವಕಾಶ ನೀಡಲಾಗಿತ್ತು. ಆದರೆ, ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿ ಎಂಟು ದಿನಗಳಾಗಿದ್ದರೂ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ವಿಧಾನಮಂಡಲ ಅಧಿವೇಶನಕ್ಕೆ ಕೇವಲ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸಿ ಬಂದಿದ್ದಾರೆ. ಸಭೆಯ ವಿವರಗಳ ಆಧಾರದ ಮೇಲೆ ಕೆಲ ಸಚಿವರಿಗೆ ದೂರವಾಣಿ ಮೂಲಕ ಅನೌಪಚಾರಿಕವಾಗಿ ಖಾತೆಗಳ ಮಾಹಿತಿ ತಲುಪಿಸಲಾಗಿದೆಯಾದರೂ, ಅಧಿಕೃತ ಆದೇಶ ಹೊರಬೀಳದೆ ಸಚಿವರು ಅಧಿಕಾರ ವಹಿಸಿಕೊಳ್ಳಲಾಗದೆ ಪರದಾಡುವಂತಾಗಿದೆ. ಹೀಗಾಗಿ ಸಚಿವರು ಅಧಿವೇಶನ ಎದುರಿಸಲು ಅಧಿಕಾರಿಗಳೊಂದಿಗೆ ದೂರವಾಣಿಯಲ್ಲೇ ಚರ್ಚಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಮುಖ್ಯಮಂತ್ರಿಯವರ ಪರಮಾಧಿಕಾರವಾಗಿದ್ದರೂ, ಅದು ನೆಪಮಾತ್ರಕ್ಕೆ ಸೀಮಿತಗೊಂಡಿದೆ. ಹೈಕಮಾಂಡ್‌ನಿಂದ ಪಟ್ಟಿ ಬರದೇ ಇರುವುದರಿಂದ ಖಾತೆ ಹಂಚಿಕೆ ನಡುನೀರಿನಲ್ಲಿ ನಿಂತಿದೆ. ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನ ಬಿಡಿಸಿಕೊಟ್ಟ ಹಿನ್ನೆಲೆಯಲ್ಲಿ ವರಿಷ್ಠರ ಮರ್ಜಿಗೆ ಸಿಲುಕಿರುವ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಅಣತಿ ಪಾಲನೆಗಷ್ಟೇ ಸೀಮಿತವಾಗಿದ್ದಾರೆ ಎಂಬ ಆರೋಪಗಳು ತೀವ್ರಗೊಂಡಿದ್ದು, ಈ ವಿಪರೀತ ಹಸ್ತಕ್ಷೇಪವು ರಾಜ್ಯ ಸರ್ಕಾರದ ಒಟ್ಟು ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.