image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂವಿಧಾನದ ಪಾಠ ಬಿಜೆಪಿಗೆ ಬೇಕಿಲ್ಲ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಸಂವಿಧಾನದ ಪಾಠ ಬಿಜೆಪಿಗೆ ಬೇಕಿಲ್ಲ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು : ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸಂವಿಧಾನದ ಪಾಠದ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆಯನ್ನು ವಿರೋಧಿಸಿ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಸರಿಯಾಗಿ ಓದಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ಸಂವಿಧಾನದ ವಿಧಿ 178ರ ಪ್ರಕಾರ ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ಉಪ ಸಭಾಧ್ಯಕ್ಷರನ್ನು ವಿಧಾನಸಭೆಯೇ ಆಯ್ಕೆ ಮಾಡುತ್ತದೆ ಮತ್ತು ವಿಧಿ 182ರ ಪ್ರಕಾರ ವಿಧಾನಪರಿಷತ್ತಿನ ಸಭಾಪತಿ ಹಾಗೂ ಉಪಸಭಾಪತಿಯನ್ನು ವಿಧಾನಪರಿಷತ್ತೇ ಆಯ್ಕೆ ಮಾಡುತ್ತದೆ. ಕಾಂಗ್ರೆಸ್ ಪಕ್ಷವು ಕೇವಲ ತನ್ನ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿ ಪ್ರಕಟಿಸಿದೆಯೇ ಹೊರತು ನೇರವಾಗಿ ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡಿಲ್ಲ. ಸದನದಲ್ಲಿ ನಡೆಯಬೇಕಾದ ಅಧಿಕೃತ ಆಯ್ಕೆ ಪ್ರಕ್ರಿಯೆ ಎಂದಿನಂತೆಯೇ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನ ಕ್ರಮವನ್ನು 'ಸಂವಿಧಾನ ವಿರೋಧಿ' ಎಂದು ಕೂಗುತ್ತಿರುವುದು ಬಿಜೆಪಿಯ ಅಜ್ಞಾನದ ಪ್ರದರ್ಶನ ಎಂದಿರುವ ಹರಿಪ್ರಸಾದ್, ಈ ಹಿಂದೆ ಸ್ವತಃ ಬಿಜೆಪಿ ನಡೆದುಕೊಂಡ ಹಾದಿಯನ್ನು ಉದಾಹರಿಸಿದ್ದಾರೆ. ಕರ್ನಾಟಕ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಸ್ವತಃ ಬಿಜೆಪಿಯ ಕೇಂದ್ರ ನಾಯಕತ್ವವೇ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಸಲು ಸೂಚಿಸಿರಲಿಲ್ಲವೇ? ಲೋಕಸಭಾ ಚುನಾವಣೆಗೂ ಮುನ್ನವೇ ಓಂ ಬಿರ್ಲಾ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಪ್ರಕಟಿಸಿರಲಿಲ್ಲವೇ? ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಸದನದ ಆಯ್ಕೆಗೂ ಮುನ್ನವೇ ರಥೀಂದ್ರ ಬೋಸ್‌ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಘೋಷಿಸಿರಲಿಲ್ಲವೇ? ಬಿಜೆಪಿ ಮಾಡಿದರೆ ಅದು ಅಭ್ಯರ್ಥಿಯ ಆಯ್ಕೆ, ಅದೇ ಕಾಂಗ್ರೆಸ್ ಮಾಡಿದರೆ ಸಂವಿಧಾನ ವಿರೋಧವೇ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂವಿಧಾನದ ಪಾವಿತ್ರ್ಯದ ಬಗ್ಗೆ ಮಾತನಾಡುವ ಬಿಜೆಪಿ ಮೊದಲು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು ಎಂದಿರುವ ಅವರು, ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕೇ ಇಲ್ಲದ 12 ನಾಮನಿರ್ದೇಶಿತ ಸದಸ್ಯರ ಮತಗಳನ್ನು ಸೇರಿಸಿ ಕೇವಲ 6 ಮತಗಳ ಅಂತರದಲ್ಲಿ ಗೆದ್ದ ಎಂ.ಕೆ. ಪ್ರಾಣೇಶ್ ಅವರನ್ನು ವಿಧಾನಪರಿಷತ್ತಿನ ಉಪಸಭಾಪತಿ ಹುದ್ದೆಯಲ್ಲಿ ಕೂರಿಸಿದಾಗ ಬಿಜೆಪಿಗೆ ಸಂವಿಧಾನ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸಾಂವಿಧಾನಿಕ ಅಕ್ರಮವನ್ನು ಮುಚ್ಚಿಹಾಕಲು ಮತದಾನದ ಗೌಪ್ಯತೆಯನ್ನು ನೆಪವಾಗಿ ಬಳಸಲಾಗದು ಎಂದು ಸ್ಪಷ್ಟಪಡಿಸಿ ನ್ಯಾಯಾಲಯವು ಪ್ರಾಣೇಶ್ ಅವರ ಆಯ್ಕೆಯನ್ನೇ ರದ್ದುಗೊಳಿಸಿದೆ ಎಂಬುದನ್ನು ನೆನಪಿಸಿರುವ ಹರಿಪ್ರಸಾದ್, ಅಸಿಂಧು ಮತಗಳ ಬಲದಿಂದ ಗೆದ್ದವರನ್ನು ಉನ್ನತ ಹುದ್ದೆಯಲ್ಲಿ ಕೂರಿಸಲು ನಾಚಿಕೆಯಾಗದವರು ಇಂದು ಪಕ್ಷದ ಅಧಿಕೃತ ಲೆಟರ್‌ಹೆಡ್‌ನಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದನ್ನು ವಿರೋಧಿಸಿ ಬಿಟ್ಟಿ ಪ್ರವಚನ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

Category
ಕರಾವಳಿ ತರಂಗಿಣಿ