ವಿಜಯಪುರ : ವಿಜಯಪುರದ ತಿಕೋಟಾದಲ್ಲಿ ನಡೆದ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಗೊಂದಲಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ವರದಿ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಸುದ್ದಿಸಂಸ್ಥೆಯ ಕ್ಷಮೆಯಾಚನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಈಗ ಕ್ಷಮೆ ಕೇಳಿದರೆ ಏನು ಪ್ರಯೋಜನ? ನನಗಾಗಿರುವ ಹಾನಿಯನ್ನು ಸರಿಪಡಿಸಲು ಯಾರಿಂದ ಸಾಧ್ಯ?" ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಭಾರತದಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮ ಇಂದು ಕಣ್ಮರೆಯಾಗುತ್ತಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
ವಿಜಯಪುರ ಪರೀಕ್ಷಾ ಗೊಂದಲದ ಕುರಿತು ವಿರೋಧ ಪಕ್ಷದ ನಾಯಕರು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್, "ಬಿಜೆಪಿ ನಾಯಕರು 25 ದಿನ ಉಪವಾಸ ಕುಳಿತರೆ ನಾನು ರಾಜೀನಾಮೆ ನೀಡುತ್ತೇನೆ" ಎಂದಿದ್ದರು. ಆದರೆ, ಪಿಟಿಐ ಈ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿ, "ಉದ್ಯೋಗಾಕಾಂಕ್ಷಿಗಳು ಉಪವಾಸ ಕುಳಿತರೆ ರಾಜೀನಾಮೆ ನೀಡುತ್ತೇನೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ ಎಂದು ವರದಿ ಮಾಡಿತ್ತು. ಈ ವರದಿ ಜಾಲತಾಣಗಳಲ್ಲಿ ವ್ಯಾಪಕ ವಿವಾದ ಸೃಷ್ಟಿಸಿದ ಬಳಿಕ ಪಿಟಿಐ ತನ್ನ ಪೋಸ್ಟ್ ಅನ್ನು ಹಿಂಪಡೆದು ಕ್ಷಮೆ ಯಾಚಿಸಿತ್ತು. ಇದಕ್ಕೆ ಕಿಡಿಕಾರಿರುವ ಸಚಿವರು, "ಈ ತಪ್ಪು ಮಾಹಿತಿಯನ್ನು ಕೇವಲ ರಾಜಕೀಯ ಪಕ್ಷಗಳು ಮಾತ್ರವಲ್ಲದೆ, ಯುಟ್ಯೂಬರ್‌ಗಳು ಸೇರಿದಂತೆ ಅನೇಕ ಕಂಟೆಂಟ್ ಕ್ರಿಯೇಟರ್ಸ್‌ಗಳು ಬಳಸಿ ಸುದ್ದಿ ಮಾಡಿದ್ದಾರೆ. ಈಗ ಆ ಹಾನಿಯನ್ನು ಯಾರು ಸರಿಪಡಿಸುತ್ತಾರೆ? ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ?" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.