image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಂಕಿಪುರ ಉಪಚುನಾವಣೆ : ಬಿಜೆಪಿ ಭದ್ರಕೋಟೆ ಧೂಳಿಪಟ ಮಾಡಿದ ಪ್ರಶಾಂತ್ ಕಿಶೋರ್

ಬಂಕಿಪುರ ಉಪಚುನಾವಣೆ : ಬಿಜೆಪಿ ಭದ್ರಕೋಟೆ ಧೂಳಿಪಟ ಮಾಡಿದ ಪ್ರಶಾಂತ್ ಕಿಶೋರ್

ಪಾಟ್ನಾ : ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು ಸಾಧಿಸಿದ್ದು, 30 ವರ್ಷಗಳ ಬಿಜೆಪಿ ಅಧಿಪತ್ಯವನ್ನು ಧೂಳಿಪಟ ಮಾಡಿದ್ದಾರೆ. ತಮ್ಮ ಮೊದಲ ನೇರ ಚುನಾವಣಾ ಸ್ಪರ್ಧೆಯಲ್ಲೇ ಬಿಜೆಪಿಯ ನೀರಜ್ ಕುಮಾರ್ ಅವರನ್ನು 18,953 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ, ಪ್ರಶಾಂತ್ ಕಿಶೋರ್ ತಮ್ಮ ಪಕ್ಷಕ್ಕೆ ಚೊಚ್ಚಲ ಚುನಾವಣಾ ಗೆಲುವಿನ ಸಿಹಿ ನೀಡಿದ್ದಾರೆ.

1995ರಿಂದ ಬಿಜೆಪಿಯ ಪ್ರಬಲ ಭದ್ರಕೋಟೆಯಾಗಿದ್ದ ಬಂಕಿಪುರ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಎದುರಾಗಿತ್ತು. ಈ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ಈ ಫಲಿತಾಂಶವು ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಸಮರ್ಥ ಹಾಗೂ ದಕ್ಷ ವ್ಯಕ್ತಿಯನ್ನು ನೇಮಿಸಲು ಬಿಜೆಪಿ ನಾಯಕತ್ವಕ್ಕೆ ಜನರು ನೀಡಿದ ಸ್ಪಷ್ಟ ಸಂದೇಶವಾಗಿದೆ ಎಂದಿದ್ದಾರೆ. ಬಿಹಾರದ ಜನತೆ ಅಪರಾಧ ಹಿನ್ನೆಲೆಯ ನಾಯಕರ ಬದಲಾಗಿ ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶಗಳು ಮತ್ತು ನೈಜ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜುಲೈ 31ರಂದು ನಡೆದ ಇತರ ರಾಜ್ಯಗಳ ಉಪಚುನಾವಣಾ ಫಲಿತಾಂಶಗಳೂ ಪ್ರಕಟಗೊಂಡಿವೆ. ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘನಶ್ಯಾಮ್ ಸಿಂಗ್ (66,757 ಮತಗಳು) ಅವರು ಬಿಜೆಪಿಯ ಅಶುತೋಷ್ ತಿವಾರಿ (60,741 ಮತಗಳು) ಅವರನ್ನು 6,016 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ. ಇನ್ನು ಹಾಲಿ ಶಾಸಕರ ನಿಧನದಿಂದ ತೆರವಾಗಿದ್ದ ಗುಜರಾತ್‌ನ ಮಂಜಲ್ಪುರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಿಡಿತ ಕಾಯ್ದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಸತೇಂದ್ರಭಾಯಿ ಪಟೇಲ್ ಅವರು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ 30,630 ಮತಗಳ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ.

Category
ಕರಾವಳಿ ತರಂಗಿಣಿ