image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾವೇರಿ ನೀರು ಬಿಡುಗಡೆ ಖಂಡಿಸಿ ಕೆಆರ್‌ಎಸ್ ಬಳಿ ಬಿಜೆಪಿ ಪ್ರತಿಭಟನೆ: ಡಾ. ಸಿ.ಟಿ. ರವಿ ಆಗ್ರಹ

ಕಾವೇರಿ ನೀರು ಬಿಡುಗಡೆ ಖಂಡಿಸಿ ಕೆಆರ್‌ಎಸ್ ಬಳಿ ಬಿಜೆಪಿ ಪ್ರತಿಭಟನೆ: ಡಾ. ಸಿ.ಟಿ. ರವಿ ಆಗ್ರಹ

ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟು ಬಳಿ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ, ರಾಜ್ಯದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ರಾಜ್ಯದ ಹಕ್ಕನ್ನು ಕಾಪಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಪಕ್ಷದಲ್ಲಿದ್ದಾಗ "ನಮ್ಮ ನೀರು, ನಮ್ಮ ಹಕ್ಕು" ಎಂದು ಪ್ರತಿಪಾದಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಈಗಲೂ ಅದೇ ದಿಟ್ಟತನ ಪ್ರದರ್ಶಿಸಿ ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದರು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಕಾವೇರಿ ನೀರಿನ ವಿಚಾರದಲ್ಲಿ ತೋರಿದ್ದ ರಾಜಕೀಯ ಎದೆಗಾರಿಕೆಯನ್ನು ಈಗಿನ ಮುಖ್ಯಮಂತ್ರಿಗಳು ಪ್ರದರ್ಶಿಸಬೇಕಾಗಿದೆ. ಪ್ರಸ್ತುತ ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಶೇಕಡಾ 60 ರಷ್ಟು ಮಳೆ ಕೊರತೆಯಾಗಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾದ ಕಾರಣ ನಾರಾಯಣಪುರ ಅಣೆಕಟ್ಟಿನಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ನೀರಿದ್ದು, ಉಳಿದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಜಲಾಶಯಗಳಲ್ಲಿರುವ ನೀರನ್ನು ಮೊದಲು ಕುಡಿಯುವ ನೀರಿಗಾಗಿ ಸುರಕ್ಷಿತವಾಗಿ ಸಂರಕ್ಷಿಸಬೇಕಾಗಿದೆ. ಮಳೆ ಮುಂದುವರಿಯದಿದ್ದರೆ ಮುಂಬರುವ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರದೇಶಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ.

ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ನೀರಿರುವುದರಿಂದ, ಅಲ್ಲಿನ ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಮಾತುಕತೆ ನಡೆಸಿ ಕರ್ನಾಟಕದಲ್ಲಿರುವ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಧೈರ್ಯವನ್ನು ಮುಖ್ಯಮಂತ್ರಿಗಳು ತೋರಬೇಕು ಎಂದು ಅವರು ಹೇಳಿದರು. "ನೀವು ತಮಿಳುನಾಡಿನ ವಾಟರ್ ಮ್ಯಾನ್ ಅಲ್ಲ, ಕರ್ನಾಟಕದ ಮುಖ್ಯಮಂತ್ರಿ" ಎಂದು ಡಾ. ರವಿ ನೇರವಾಗಿ ವಾಗ್ದಾಳಿ ನಡೆಸಿದರು. ರಾಜ್ಯದ ರೈತರಿಗೆ ಹಾಗೂ ಜನರಿಗೆ ನೀರು ಒದಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಸಮಂಜಸವಲ್ಲ. ಈ ಹೋರಾಟವು ಕರ್ನಾಟಕ ಮತ್ತು ತಮಿಳುನಾಡಿನ ರೈತರ ನಡುವಿನ ಸಂಘರ್ಷವಲ್ಲ ಹಾಗೂ ರೈತರನ್ನು ವಿಭಜಿಸುವುದು ತಮ್ಮ ಉದ್ದೇಶವಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮುಂಬರುವ 8 ರಿಂದ 10 ತಿಂಗಳ ಅವಧಿಗೆ ರಾಜ್ಯದ ಜನರಿಗೆ ಅಗತ್ಯವಿರುವಷ್ಟು ಕುಡಿಯುವ ನೀರು ಲಭ್ಯವಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಮತ್ತು ಹೆಚ್ಚುವರಿ ನೀರಿದ್ದರೆ ಮಾತ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಶಾಸಕರಾದ ಟಿ.ಎಸ್. ಶ್ರೀವತ್ಸ, ರಘು ಕೌಟಿಲ್ಯ, ಮಾಜಿ ಸಚಿವರಾದ ಕೆ.ಸಿ. ನಾರಾಯಣಗೌಡ, ಎನ್. ಮಹೇಶ್, ಮಾಜಿ ಸಂಸದೆ ಸುಮಲತಾ ಅಂಬರೀಷ್, ಮಂಡ್ಯ ಜಿಲ್ಲಾಧ್ಯಕ್ಷ ಇಂದ್ರೇಶ್, ಮೈಸೂರು ಜಿಲ್ಲಾಧ್ಯಕ್ಷ ನಾಗೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಸೇರಿದಂತೆ ಪ್ರಮುಖ ನಾಯಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ