ನವದೆಹಲಿ : ನೀಟ್ (NEET) ಪ್ರಶ್ನೆ ಪತ್ರಿಕೆ ವಿವಾದ ಹಾಗೂ ಸರ್ಕಾರದ ವಿರುದ್ಧದ ಪ್ರತಿಭಟನೆಗಳ ನಡುವೆಯೇ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಭಾರೀ ಆಘಾತ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ಪಕ್ಷದ ಪ್ರಮುಖ ನಿರ್ಧಾರಗಳನ್ನು ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೇಹಜಾದ್ ಪೂನಾವಾಲಾ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಚರ್ಚಾಕೂಟಗಳಲ್ಲಿ ತಮ್ಮ ಪ್ರಖರ ಮಾತು, ತಮಾಷೆ, ವ್ಯಂಗ್ಯ ಹಾಗೂ ಅಂಕಿ-ಅಂಶಗಳ ಸಮೇತ ಎದುರಾಳಿಗಳನ್ನು ಮಣಿಸುತ್ತಿದ್ದ ಶೇಹಜಾದ್ ಪೂನಾವಾಲಾ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ 'ಥಗ್ ಲೈಫ್' ವಿಡಿಯೋಗಳ ಮೂಲಕವೇ ಪ್ರಸಿದ್ಧರಾಗಿದ್ದರು. ನೀಟ್ ಹೋರಾಟದ ಸಮಯದಲ್ಲೂ ಕೇಂದ್ರ ಸರ್ಕಾರದ ನಿಲುವುಗಳನ್ನು ಗಟ್ಟಿಯಾಗಿ ಸಮರ್ಥಿಸಿಕೊಂಡಿದ್ದ ಅವರು, ಇದೀಗ ವೈಯಕ್ತಿಕ ಕಾರಣಗಳನ್ನು ನೀಡಿ ಬಿಜೆಪಿಯಿಂದ ದೂರವಾಗಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಪ್ರೊಫೈಲ್ ಬದಲಾಯಿಸಿರುವ ಶೇಹಜಾದ್, "ಬಿಜೆಪಿ ರಾಷ್ಟ್ರೀಯ ವಕ್ತಾರ" ಎಂಬ ಸಾಲನ್ನು ತೆಗೆದುಹಾಕಿದ್ದಾರೆ. ಪ್ರೊಫೈಲ್‌ನಲ್ಲಿ "ನನ್ನ ಧರ್ಮ ಮುಸ್ಲಿಂ, ಆದರೆ ನನ್ನ ಸಂಸ್ಕೃತಿ ಹಿಂದೂ. ಜೀವನ ಪರ್ಯಂತ ಪ್ರಧಾನಿ ಮೋದಿ ಅಭಿಮಾನಿ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಬಿಜೆಪಿಯಿಂದ ಹೊರಬಂದಿದ್ದರೂ ಮೋದಿ ಅವರ ಅಭಿಮಾನಿಯಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. 2017ರಲ್ಲಿ ತಮ್ಮ ಸಹೋದರ ತೆಹ್ಸೀನ್ ಪೂನಾವಾಲಾ ಇದ್ದ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದ ಶೇಹಜಾದ್, ತಮ್ಮ ಚುರುಕಾದ ಮಾತುಗಳಿಂದ ಹೈಕಮಾಂಡ್ ಗಮನಸೆಳೆದು ಅತಿ ಸಣ್ಣ ವಯಸ್ಸಿನಲ್ಲೇ ರಾಷ್ಟ್ರೀಯ ವಕ್ತಾರ ಹುದ್ದೆಗೆ ಏರಿದ್ದರು. ಇದೀಗ ಅವರು ಬಿಜೆಪಿ ತೊರೆದಿದ್ದರೂ ಮೋದಿ ಅಭಿಮಾನಿ ಎಂದು ಹೇಳಿಕೊಂಡಿರುವುದರಿಂದ, ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆಗಳಿಲ್ಲ ಎನ್ನಲಾಗಿದ್ದು, ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.