ತೆಲಂಗಾಣ : ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಎಂಜಿನಿಯರಿಂಗ್ ಪದವೀಧರರ ಉದ್ಯೋಗಾರ್ಹತೆಯ ಕುರಿತು ವ್ಯಕ್ತಪಡಿಸಿದ ಕಳವಳ ಮತ್ತು ಆ ಸಂದರ್ಭದಲ್ಲಿ ಬಳಸಿದ 'ಕ್ರಿಮಿನಲ್ ವೇಸ್ಟ್' ಎಂಬ ಪದವು ರಾಜ್ಯದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ಹಾಗೂ ಅವರ ಸಾಮರ್ಥ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳಾದ ಬಿಆರ್‌ಎಸ್ ಮತ್ತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರೇವಂತ್ ರೆಡ್ಡಿ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ತಮ್ಮ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ್ದರು. ರಾಜ್ಯದಲ್ಲಿ ಪ್ರತಿವರ್ಷ ಸುಮಾರು 1.10 ಲಕ್ಷ ಎಂಜಿನಿಯರಿಂಗ್ ಪದವೀಧರರು ಕೋರ್ಸ್ ಪೂರ್ಣಗೊಳಿಸುತ್ತಿದ್ದರೂ, ಅವರಲ್ಲಿ ಹಲವರಿಗೆ ಒಂದು ಖಾಲಿ ಕಾಗದದಲ್ಲಿ ಉದ್ಯೋಗದ ಅರ್ಜಿಯನ್ನೂ ಸರಿಯಾಗಿ ಬರೆಯಲು ಬರುವುದಿಲ್ಲ. ಎಂಜಿನಿಯರಿಂಗ್ ಓದಿರುವುದರಿಂದ ಅವರು ಸಣ್ಣಪುಟ್ಟ ಕೆಲಸಕ್ಕೂ ಅರ್ಜಿ ಸಲ್ಲಿಸುವುದಿಲ್ಲ, ಜೊತೆಗೆ ಯಾವುದೇ ಕೌಶಲ್ಯವನ್ನೂ ಕರಗತ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದ ಅವರು, ಈ ಸ್ಥಿತಿಯನ್ನು 'ಕ್ರಿಮಿನಲ್ ವೇಸ್ಟ್' ಎಂದು ಬಣ್ಣಿಸಿದ್ದರು. ನಂತರ ತಾವು ವಿದ್ಯಾರ್ಥಿಗಳನ್ನಲ್ಲ, ಬದಲಾಗಿ ದೋಷಪೂರಿತ ಶಿಕ್ಷಣ ವ್ಯವಸ್ಥೆಯನ್ನು ದೂರುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದರು.
ಆದರೆ ಈ ಹೇಳಿಕೆಗೆ ವಿಪಕ್ಷಗಳು ತೀವ್ರ ಕಿಡಿಕಾರಿವೆ. ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, ಇಂತಹ ಹೇಳಿಕೆ ನೀಡಲು ರೇವಂತ್ ರೆಡ್ಡಿ ಅವರಿಗೆ ಏನು ಅರ್ಹತೆಯಿದೆ ಎಂದು ಪ್ರಶ್ನಿಸಿದ್ದಾರೆ. "ಅವರು ತಮ್ಮ ಜೀವನದಲ್ಲಿ ಎಂದಾದರೂ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆಯೇ, ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗಿದ್ದಾರೆಯೇ ಅಥವಾ ವೃತ್ತಿಪರ ವಾತಾವರಣದಲ್ಲಿ ಕೆಲಸ ಮಾಡಿದ್ದಾರೆಯೇ?" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎನ್.ವಿ. ಸುಭಾಷ್ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ಮೂರ್ಖರು ಎಂದಿದ್ದರೆ, ಅವರ ಆಪ್ತ ರೇವಂತ್ ರೆಡ್ಡಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು 'ಕ್ರಿಮಿನಲ್ ವೇಸ್ಟ್' ಎಂದು ಕರೆಯುವ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ದೇಶದ ಬೆನ್ನೆಲುಬಾಗಿರುವ ಎಂಜಿನಿಯರ್‌ಗಳನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಈ ಹೇಳಿಕೆಯ ವಿರುದ್ಧ ಸ್ವಯಂಘೋಷಿತ ಜಿನ್ ಝಿ (Gen Z) ಕಾರ್ಯಕರ್ತರು ಈಗ ಧ್ವನಿ ಎತ್ತುವರೇ ಎಂದು ಪ್ರಶ್ನಿಸಿದ್ದಾರೆ. ವಿಪಕ್ಷಗಳ ಈ ವಾಗ್ದಾಳಿಗೆ ಕಾಂಗ್ರೆಸ್ ಸಂಸದ ಚಾಮಲ ಕಿರಣ್ ಕುಮಾರ್ ರೆಡ್ಡಿ ತಿರುಗೇಟು ನೀಡಿದ್ದಾರೆ. ಕೆಟಿಆರ್ ರಾಜಕೀಯ ವಂಶಪಾರಂಪರ್ಯದ ಮೂಲಕ ರಾಜಕೀಯಕ್ಕೆ ಬಂದವರಾಗಿದ್ದು, ರೇವಂತ್ ರೆಡ್ಡಿ ಅವರು ಜೆಡ್‌ಪಿಟಿಸಿ ಸದಸ್ಯತ್ವದಿಂದ ಹಿಡಿದು ಮುಖ್ಯಮಂತ್ರಿಯವರೆಗೆ ತಳಮಟ್ಟದಿಂದ ಹಂತ ಹಂತವಾಗಿ ಬೆಳೆದುಬಂದ ನಾಯಕ ಎಂದು ಸಮರ್ಥಿಸಿಕೊಂಡಿದ್ದಾರೆ. ಅಬ್ರಾಹಂ ಲಿಂಕನ್ ಮತ್ತು ವಿನ್‌ಸ್ಟನ್ ಚರ್ಚಿಲ್ ಅವರಂತಹ ನಾಯಕರ ಸಾಧನೆ ಶೈಕ್ಷಣಿಕ ಪದವಿಗಳು ಅಥವಾ ಕುಟುಂಬದ ಸೌಲಭ್ಯದಿಂದ ಬಂದಿದ್ದಲ್ಲ, ಬದಲಾಗಿ ನಾಯಕತ್ವ ಮತ್ತು ದೃಢಸಂಕಲ್ಪದಿಂದ ಬಂದಿದ್ದಾಗಿದೆ ಎಂದು ತಿರುಗೇಟು ನೀಡಿದ್ದಾರೆ.