image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಹುಲ್ ಗಾಂಧಿ ವಿರುದ್ಧ ಅವಹೇಳನ: ಶಾಸಕ ಯಶ್‌ಪಾಲ್ ಸುವರ್ಣ ಅನರ್ಹತೆಗೆ ಮಹಿಳಾ ಕಾಂಗ್ರೆಸ್ ಆಗ್ರಹ

ರಾಹುಲ್ ಗಾಂಧಿ ವಿರುದ್ಧ ಅವಹೇಳನ: ಶಾಸಕ ಯಶ್‌ಪಾಲ್ ಸುವರ್ಣ ಅನರ್ಹತೆಗೆ ಮಹಿಳಾ ಕಾಂಗ್ರೆಸ್ ಆಗ್ರಹ

ಮಂಗಳೂರು: ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ನೀಡಿರುವ ಅವಹೇಳನಕಾರಿ ಮತ್ತು ಅಸಂವಿಧಾನಿಕ ಹೇಳಿಕೆಯನ್ನು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಮಂಜುಳಾ ನಾಯಕ್ ತೀವ್ರವಾಗಿ ಖಂಡಿಸಿದ್ದಾರೆ. ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಬಳಸಿರುವ ಭಾಷೆಯು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತದ್ವಿರುದ್ಧವಾಗಿದ್ದು, ಜನಪ್ರತಿನಿಧಿಯೊಬ್ಬರಿಗೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಹಾಗೂ ನೀತಿ-ನಿರ್ಧಾರಗಳ ಕುರಿತು ವಾಸ್ತವಾಧಾರಿತವಾಗಿ ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ವೈಯಕ್ತಿಕ ನಿಂದನೆ, ಅವಹೇಳನಕಾರಿ ಪದಪ್ರಯೋಗ ಹಾಗೂ ಬೆದರಿಕೆಯ ಧಾಟಿಯ ಭಾಷೆಯನ್ನು ಬಳಸುವುದು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ.

ಹಿಂದೆ ಗಂಭೀರ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸಿದ್ದ ಯಶ್‌ಪಾಲ್ ಸುವರ್ಣ ಅವರು, ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿ ಮತ್ತು ಸಂಯಮ ಪ್ರದರ್ಶಿಸುವ ಅಗತ್ಯವಿತ್ತು. ಶಾಸಕರಂತಹ ಘನತೆಯ ಸ್ಥಾನದಲ್ಲಿರುವವರು ತಮ್ಮ ಹುದ್ದೆಯ ಗೌರವವನ್ನು ಕಾಪಾಡುವ ರೀತಿಯಲ್ಲಿ ನಡೆದುಕೊಳ್ಳಬೇಕು. ಹೀಗಾಗಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಮಂಜುಳಾ ನಾಯಕ್ ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಶಾಸಕರ ವಿರುದ್ಧ ಕಟ್ಟುನಿಟ್ಟಿನ ಕಠಿಣ ಕಾನೂನು ಕ್ರಮ ಜರುಗಿಸಬೇಕು. ದೇಶದ ಸಂವಿಧಾನದ ಆಶಯಗಳಿಗೆ ಹಾಗೂ ನೆಲದ ಕಾನೂನಿಗೆ ಬೆಲೆ ಕೊಡದೆ, ಸಾಮಾಜಿಕ ಸೌಹಾರ್ದತೆಯನ್ನು ಹಾಳುಗೆಡಹುತ್ತಿರುವ ಇಂತಹ ಶಾಸಕರನ್ನು ಆ ಸ್ಥಾನದಿಂದಲೇ ಅನರ್ಹಗೊಳಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ