image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಹ್ಲಾದ ಜೋಶಿ ಶಿಕ್ಷಣ ಸಚಿವರಾಗಿದ್ದಕ್ಕೆ ತಲೆತಗ್ಗಿಸುವಂತಾಗಿದೆ: ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ

ಪ್ರಹ್ಲಾದ ಜೋಶಿ ಶಿಕ್ಷಣ ಸಚಿವರಾಗಿದ್ದಕ್ಕೆ ತಲೆತಗ್ಗಿಸುವಂತಾಗಿದೆ: ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ

ಬೆಂಗಳೂರು : ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತೀವ್ರವಾಗಿ ಖಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾದರೆ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾಗಿತ್ತು. ಆದರೆ, 2022ರಲ್ಲಿ ಬಿಲ್ಕಿಸ್ ಬಾನೊ ಪ್ರಕರಣದ ಅತ್ಯಾಚಾರಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಸಂಸದ ಪ್ರಲ್ಹಾದ ಜೋಶಿ ಅವರನ್ನು ಶಿಕ್ಷಣ ಸಚಿವನ್ನಾಗಿ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಕನ್ನಡಿಗರೆಲ್ಲರೂ ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ನಿರ್ಗಮಿತ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಲ್ಹಾದ ಜೋಶಿ ಇಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳಿದ್ದಂತೆ. ಸಂಘ ಪರಿವಾರದ ಎಬಿವಿಪಿಯಿಂದ ಬಂದಿರುವ ಇವರಿಬ್ಬರೂ ಮಹಿಳೆಯರು, ದಲಿತರು, ಬಡವರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಆರ್‌ಎಸ್‌ಎಸ್ ಹೊಂದಿರುವ ಧೋರಣೆಯನ್ನೇ ಹೊಂದಿದ್ದಾರೆ. ಇಲ್ಲಿ ಬದಲಾಗಿದ್ದು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳಾದ ಆರ್‌ಎಸ್‌ಎಸ್‌ ನಿರ್ದೇಶನದಂತೆಯೇ ಈ ಇಲಾಖೆ ನಡೆಯಲಿದೆ ಎಂದು ಅವರು ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರು ಪ್ರಲ್ಹಾದ ಜೋಶಿ ಅವರ ಮುಖವಾಡವನ್ನು ದೇಶದ ಮುಂದೆ ಕಳಚಿಟ್ಟಿದ್ದಾರೆ. ಸದನದಲ್ಲಿ ವಿಪಕ್ಷಗಳ ಧ್ವನಿಯನ್ನು ತಡೆಯಬಹುದಾದರೂ ದೇಶದ ಕೋಟ್ಯಂತರ ಜನರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಭವಿಷ್ಯದ ಬಗ್ಗೆ ಕಾಳಜಿಯಿದ್ದರೆ ತಕ್ಷಣವೇ ಜೋಶಿ ಅವರಿಂದ ಶಿಕ್ಷಣ ಖಾತೆಯನ್ನು ಹಿಂಪಡೆದು ಸೂಕ್ತ ಅರ್ಹತೆ ಇರುವವರಿಗೆ ವಹಿಸಬೇಕು ಎಂದು ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.

Category
ಕರಾವಳಿ ತರಂಗಿಣಿ