image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯ ಸಂಪುಟ ಕಸರತ್ತು: ದೆಹಲಿ ಸಭೆ ಮುಂದೂಡಿಕೆ, ಶಾಸಕರಿಗೆ ನಿರಾಸೆ

ರಾಜ್ಯ ಸಂಪುಟ ಕಸರತ್ತು: ದೆಹಲಿ ಸಭೆ ಮುಂದೂಡಿಕೆ, ಶಾಸಕರಿಗೆ ನಿರಾಸೆ

ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್‌ರಚನೆಯ ಕಸರತ್ತು ದೆಹಲಿಯಲ್ಲಿ ತೀವ್ರ ಕುತೂಹಲ ಮತ್ತು ಹೈಡ್ರಾಮಾಗೆ ಕಾರಣವಾಗಿದೆ. ಇಂದು ರಾತ್ರಿ ಹೈಕಮಾಂಡ್ ನಾಯಕರ ಜೊತೆ ನಡೆಯಬೇಕಿದ್ದ ಪ್ರಮುಖ ಸಭೆಯು ಮತ್ತೆ ನಾಳೆಗೆ ಮುಂದೂಡಿಕೆಯಾಗಿದ್ದು, ಕಳೆದೆರಡು-ಮೂರು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲೇ ಬೀಡುಬಿಟ್ಟಿರುವ ರಾಜ್ಯ ನಾಯಕರು ಹಾಗೂ ಸಚಿವ ಆಕಾಂಕ್ಷಿ ಶಾಸಕರಿಗೆ ತೀವ್ರ ನಿರಾಸೆಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿ ಹಾಗೂ ಇತರ ತುರ್ತು ರಾಜಕೀಯ ವಿದ್ಯಮಾನಗಳಲ್ಲಿ ಹೈಕಮಾಂಡ್ ನಾಯಕರು ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ. ನಾಳೆಗೆ ಸಭೆಯನ್ನು ಮುಂದೂಡಲಾಗಿದ್ದರೂ ಚರ್ಚೆಗೆ ಇನ್ನು ನಿರ್ದಿಷ್ಟ ಸಮಯ ನಿಗದಿಯಾಗದಿರುವುದು ರಾಜ್ಯ ನಾಯಕರ ತಲೆಬಿಸಿಗೆ ಕಾರಣವಾಗಿದೆ.

ಸಂಪುಟ ಸಚಿವರ ಅಂತಿಮ ಪಟ್ಟಿಗೆ ಸಮ್ಮತಿ ಪಡೆಯುವ ಸಲುವಾಗಿ ರಾಜ್ಯದ ಪ್ರಮುಖ ನಾಯಕರು ಮೂರು ದಿನಗಳಿಂದ ದೆಹಲಿಯಲ್ಲೇ ತಂಗಿದ್ದಾರೆ. ಇಂದು ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಟ್ಟಿ ಅಂತಿಮಗೊಳ್ಳಬೇಕಿತ್ತು. ಆದರೆ ಹೈಕಮಾಂಡ್ ಕಡೆಯಿಂದ ಯಾವುದೇ ಸ್ಪಷ್ಟ ಕರೆ ಬಾರದೆ ವಿಳಂಬವಾಗುತ್ತಿರುವುದಕ್ಕೆ ರಾಜ್ಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಯ ಹೋಟೆಲ್ ಹಾಗೂ ಕರ್ನಾಟಕ ಭವನದಲ್ಲಿ ಕಾಯ್ದು ಬೇಸತ್ತಿರುವ ಸಚಿವ ಆಕಾಂಕ್ಷಿ ಶಾಸಕರು, ಸ್ಥಾನ ಸಿಗುತ್ತದೆಯೋ ಇಲ್ಲವೋ ಎಂಬ ಸ್ಪಷ್ಟನೆ ಇಲ್ಲದೆ ಸ್ವಗ್ರಾಮಗಳಿಗೆ ಮರಳಲು ಸಿದ್ಧರಾಗಿದ್ದು, ಕೆಲವರು ಈಗಾಗಲೇ ದೆಹಲಿಯಿಂದ ನಿರ್ಗಮಿಸಿದ್ದಾರೆ. ಇದೇ ವೇಳೆ ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ಸಂತೋಷ್ ಲಾಡ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಪೂರ್ವನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಾಪಸಾಗಿದ್ದೇನೆ ಎಂದು ತಿಳಿಸಿದ್ದಾರೆ. ಇಂದು ರಾತ್ರಿಯೊಳಗೆ ಸಚಿವ ಸಂಪುಟ ಪಟ್ಟಿ ಅಂತಿಮವಾಗುವ ವಿಶ್ವಾಸವಿದ್ದು, ತಮಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ಅಂತಿಮವಾಗಿ ಅವರ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಲಾಡ್ ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ