image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೀಟ್ ಅಕ್ರಮ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಮಂಗಳೂರಿನಲ್ಲಿ SFI-DYFI ಪ್ರತಿಭಟನೆ

ನೀಟ್ ಅಕ್ರಮ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಮಂಗಳೂರಿನಲ್ಲಿ SFI-DYFI ಪ್ರತಿಭಟನೆ

ಮಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಆಹೋರಾತ್ರಿ ಹೋರಾಟವನ್ನು ಬೆಂಬಲಿಸಿ ಮಂಗಳೂರು ನಗರದಲ್ಲಿ SFI ಹಾಗೂ DYFI ಜಂಟಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ DYFI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟವು ಇಡೀ ದೇಶದಾದ್ಯಂತ ವ್ಯಾಪಿಸಿದ್ದು, 56 ಇಂಚಿನ ಎದೆಯ ಪ್ರಧಾನಿಯಲ್ಲೂ ನಡುಕ ಹುಟ್ಟಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎನ್‌ಟಿಎ (NTA) ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 89 ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದು, ಇದೊಂದು ಸಂಪೂರ್ಣ ಅಸಮರ್ಥ ಸಂಸ್ಥೆಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಈ ಸಂಸ್ಥೆಯನ್ನು ರದ್ದುಗೊಳಿಸಬೇಕೆಂದು ಅವರು ತೀವ್ರವಾಗಿ ಆಗ್ರಹಿಸಿದರು.

ಇದೇ ವೇಳೆ ದೆಹಲಿಯಲ್ಲಿ ನ್ಯಾಯಯುತವಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಹಾಗೂ ಬಿಜೆಪಿಯ ಗೂಂಡಾಗಳು ನಡೆಸಿದ ದಾಳಿಯು ಅತ್ಯಂತ ಅಮಾನವೀಯ ಎಂದು ಖಂಡಿಸಿದ ಅವರು, ಈ ಹೋರಾಟಕ್ಕೆ ಜಿಲ್ಲೆಯ ಪ್ರತಿಯೊಬ್ಬ ಪ್ರಜ್ಞಾವಂತ ಜನತೆಯೂ ಬೆಂಬಲ ನೀಡಬೇಕೆಂದು ಕರೆ ನೀಡಿದರು. ಈ ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ವಿಚಾರವಾದಿ ನರೇಂದ್ರ ನಾಯಕ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ, ಚರಣ್ ಶೆಟ್ಟಿ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ವಿನುಶ ರಮಣ, ಮಹಮ್ಮದ್ ಅಜ್ಲಾನ್, ಸಂದೇಶ್, ಅಲ್ಮಾಸ್, ಶ್ರಮ, ಕಾರ್ಮಿಕ ಸಂಘಟನೆಯ ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಬಾಲಕೃಷ್ಣ ಶೆಟ್ಟಿ, ಮಹಾಬಲ ದೆಪ್ಪೆಲಿಮಾರ್, ತಯ್ಯೂಬ್ ಬೆಂಗರೆ, ನೌಶದ್ ಬೆಂಗರೆ, ಅಸುಂತ ಡಿಸೋಜ, ಪ್ರಮಿಳಾ ಶಕ್ತಿನಗರ ಹಾಗೂ ಯೋಗಿತಾ ಉಳ್ಳಾಲ ಸೇರಿದಂತೆ ಹಲವರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ