image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು: ₹10 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ

ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು: ₹10 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ

ನವದೆಹಲಿ : ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಪರೀಕ್ಷಾ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಸಂಪೂರ್ಣ ತಡೆ ಹಾಕಲು ಕೇಂದ್ರ ಸರ್ಕಾರ ಅತ್ಯಂತ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಪರೀಕ್ಷಾ ಅಕ್ರಮ ಎಸಗುವ ಸಂಘಟಿತ ಸಿಂಡಿಕೇಟ್‌ಗಳಿಗೆ ಗರಿಷ್ಠ ₹10 ಕೋಟಿ ರೂಪಾಯಿ ದಂಡ ಹಾಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಜೊತೆಗೆ, ಕೇವಲ 3 ತಿಂಗಳೊಳಗೆ ತನಿಖೆ ಮತ್ತು ವಿಚಾರಣೆ ಪೂರ್ಣಗೊಳಿಸುವ ಕಠಿಣ ತಿದ್ದುಪಡಿ ವಿಧೇಯಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂಬರುವ ಸೋಮವಾರ ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುವ ಸಾಧ್ಯತೆಯಿದೆ. ಸಂಘಟಿತ ಪ್ರಶ್ನೆಪತ್ರಿಕೆ ಸೋರಿಕೆ ರ‍್ಯಾಕೆಟ್‌ಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಉದ್ದೇಶದಿಂದ ಹಾಲಿ ಇರುವ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024'ಕ್ಕೆ ಈ ಪ್ರಮುಖ ತಿದ್ದುಪಡಿಗಳನ್ನು ತರಲಾಗುತ್ತಿದೆ. ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ Court (ತ್ವರಿತ ನ್ಯಾಯಾಲಯ) ಸ್ಥಾಪಿಸಲು ಹೊಸ ತಿದ್ದುಪಡಿಯಲ್ಲಿ ಕಾನೂನುಬದ್ಧ ಬೆಂಬಲ ನೀಡಲಾಗಿದೆ.

2024ರ ಜೂನ್‌ನಲ್ಲಿ ಜಾರಿಗೆ ಬಂದಿದ್ದ ಹಾಲಿ ಕಾಯ್ದೆಯಡಿ ಅಪರಾಧಿಗಳಿಗೆ 3 ರಿಂದ 5 ವರ್ಷ ಜೈಲು ಶಿಕ್ಷೆ ಹಾಗೂ ₹10 ಲಕ್ಷದವರೆಗೆ ದಂಡ, ಮತ್ತು ಸಂಘಟಿತ ರ‍್ಯಾಕೆಟ್‌ಗಳಿಗೆ ₹1 ಕೋಟಿ ದಂಡ ವಿಧಿಸಲು ಅವಕಾಶವಿತ್ತು. ಆದರೆ ಈಗ ಈ ದಂಡದ ಪ್ರಮಾಣವನ್ನು ನೇರವಾಗಿ ₹10 ಕೋಟಿಗೆ ಏರಿಸಲಾಗಿದೆ. ನೀಟ್-ಯುಜಿ (NEET-UG) ಹಾಗೂ ಜೆಇಇ ಪರೀಕ್ಷಾ ಅಕ್ರಮ ಖಂಡಿಸಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗೆ ಆಗ್ರಹಿಸಿ ದೇಶಾದ್ಯಂತ ವಿದ್ಯಾರ್ಥಿಗಳ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ಹಾಗೂ ಕಠಿಣ ಕ್ರಮಕ್ಕೆ ಮುಂದಾಗಿದೆ.

Category
ಕರಾವಳಿ ತರಂಗಿಣಿ