image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರತಿಭಟನೆ ಬಿಟ್ಟು ಅಭ್ಯಾಸದತ್ತ ಗಮನಹರಿಸಿ: ವಿದ್ಯಾರ್ಥಿಗಳಿಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಲಹೆ

ಪ್ರತಿಭಟನೆ ಬಿಟ್ಟು ಅಭ್ಯಾಸದತ್ತ ಗಮನಹರಿಸಿ: ವಿದ್ಯಾರ್ಥಿಗಳಿಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಲಹೆ

ನವದೆಹಲಿ : ವೈದ್ಯಕೀಯ, ಎಂಜಿನಿಯರಿಂಗ್‌ ಅಥವಾ ನಾಗರಿಕ ಸೇವೆಗಳಂತಹ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗವಹಿಸಿ ಸಮಯ ವ್ಯರ್ಥ ಮಾಡುವ ಬದಲು ತಮ್ಮ ಅಧ್ಯಯನದತ್ತ ಹೆಚ್ಚಿನ ಗಮನಹರಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ. ಸಂಸತ್ತು ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ವಿದ್ಯಾರ್ಥಿಗಳು ತಮ್ಮ ಕಳಪೆ ಸಾಧನೆ ಮತ್ತು ವೈಫಲ್ಯವನ್ನು ಪೋಷಕರ ಮುಂದೆ ಮುಚ್ಚಿಡಲು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು (NEET Paper leak) ನೆಪವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಪ್ರತಿ ವರ್ಷ ಸುಮಾರು 22 ಲಕ್ಷ ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯುತ್ತಾರೆ, ಆದರೆ ಲಭ್ಯವಿರುವುದು ಸುಮಾರು 65,000 ಸೀಟುಗಳು ಮಾತ್ರ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ಶೈಕ್ಷಣಿಕವಾಗಿ ಸಮರ್ಥರು ಎಂದೇ ಭಾವಿಸುತ್ತಾರೆ. ಆದರೆ ಪರೀಕ್ಷೆಯಲ್ಲಿ ಹಿನ್ನಡೆಯಾದಾಗ ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಧುಮುಕುತ್ತಿದ್ದಾರೆ. ಜಂತರ್ ಮಂತರ್ ವಿದ್ಯಾರ್ಥಿಗಳಿಗೆ ಸೂಕ್ತ ಸ್ಥಳವಲ್ಲ ಹಾಗೂ ಇದು ಅವರಲ್ಲಿ ನಿರಾಶೆಯ ಭಾವನೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಟನೆಗೆ ಕಳುಹಿಸುವ ಬದಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧಿಸಲ್ಪಟ್ಟಿರುವ 13 ಜನರಿಗೆ ತಕ್ಷಣ ಶಿಕ್ಷೆ ಕೊಡಿಸಲು ದೇಶದ ಪ್ರಮುಖ ವಕೀಲರನ್ನು ನೇಮಿಸಿ, ತ್ವರಿತ ನ್ಯಾಯಾಲಯಗಳನ್ನು (Fast-track courts) ಸ್ಥಾಪಿಸಲಾಗುವುದು ಎಂದರು. ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಮಹಿಳಾ ಸುರಕ್ಷತೆಗಾಗಿ ಬಲವಾದ ಕಾನೂನು ಜಾರಿಗೆ ತಂದ ಮಾದರಿಯಲ್ಲೇ, ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಸಂಸತ್ತಿನಲ್ಲಿ ಚರ್ಚೆ ನಡೆಸಿ ಕಠಿಣ ಕಾನೂನು ನಿಬಂಧನೆಗಳನ್ನು ತರಬೇಕಿದೆ. ಇದಕ್ಕೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ನಿಶಿಕಾಂತ್ ದುಬೆ ಒತ್ತಾಯಿಸಿದರು.

Category
ಕರಾವಳಿ ತರಂಗಿಣಿ