ಮಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ಇಂದು ದೇಶಾದ್ಯಂತ ವಿದ್ಯಾರ್ಥಿಗಳು ರಸ್ತೆಗಿಳಿಯುವ ಪರಿಸ್ಥಿತಿ ಬಂದಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ನಡೆಸಿಕೊಂಡ ರೀತಿ ಸರ್ವಾಧಿಕಾರಿ ಧೋರಣೆಯನ್ನು ತೋರಿಸಿದೆ. ಪ್ರಜಾಪ್ರಭುತ್ವ ಇನ್ನು ಜೀವಂತವಾಗಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ನಾಚಿಕೆ, ಮಾನ-ಮರ್ಯಾದೆ ಇದ್ದಲ್ಲಿ ಘಟನೆಯ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು ಎಂದರು. ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿ ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತೇ ಕಂಡಿದೆ. ಪ್ರತಿಭಟನೆಯಲ್ಲಿ ಬಿಜೆಪಿಯ ಗೂಂಡಾಗಳನ್ನು ಬಳಸಿದ್ದು, ಈ ದೃಶ್ಯಗಳು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಅಮೃತಸರದಲ್ಲಿ ನಡೆದ ಬ್ರಿಟಿಷರ ಹತ್ಯಾಕಾಂಡದ ಘಟನೆಗಳನ್ನು ನೆನಪಿಸಿವೆ. ಇವುಗಳನ್ನು ನೋಡುವುದಾಗಲಾದರೂ ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ ಎಂಬಂತೆ ಕಾಣುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿಯವರು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ, ಶಿಕ್ಷಣ ನೀತಿ ವಿರುದ್ಧ ಸಂವಾದ ನಡೆಸಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿ ನೀವು ಕಲಿಯಬೇಕಿತ್ತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ 22 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೇಂದ್ರ ಸರ್ಕಾರದ ವೈಫಲ್ಯದ ಫಲ ಹಾಗೂ ಇದೊಂದು ಕೊಲೆ. 2014ರಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತ ನಡೆಸುತ್ತಿದೆ. ನೀಟ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಮಂಡಳಿ)ಯನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ಈವರೆಗೆ ನೀಟ್ ಸೇರಿದಂತೆ 152 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಪ್ರತಿ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವಾಗ ಸ್ವಾಯತ್ತ ಸಂಸ್ಥೆಯಾದ ಎನ್‌ಟಿಎ ವೈಫಲ್ಯ ಹಗರಣಗಳ ಬಗ್ಗೆ ಮೇಲ್ವಿಚಾರಣೆ ಆಗಿರುವ ಕ್ರಮ ಏನು ಎಂಬುದನ್ನು ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ಪಿ ಟಿ. ಕೆ ಸುದೀರ್, ಜಯಶೀಲ ಅಡ್ಯಂತಾಯ, ಪ್ರೇಮನಾಥ್, ಸಮರ್ಥ್ ಭಟ್, ಉಪಸ್ಥಿತರಿದ್ದರು.