image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಜೆಪಿ ಪ್ರತಿಭಟನೆಯ ಹಿಂದೆ ವಿದೇಶಿ ಸಂಚು: ಬಿಜೆಪಿ ಯುವ ಮೋರ್ಚಾ ಆರೋಪ

ಸಿಜೆಪಿ ಪ್ರತಿಭಟನೆಯ ಹಿಂದೆ ವಿದೇಶಿ ಸಂಚು: ಬಿಜೆಪಿ ಯುವ ಮೋರ್ಚಾ ಆರೋಪ

ಮಂಗಳೂರು : ದೆಹಲಿಯ ಜಂತರ್ ಮಂಥರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ವಿದ್ಯಾರ್ಥಿ ಹಿತರಕ್ಷಣೆಯ ನಾಟಕವಾಗಿದ್ದು, ಇದರ ಹಿಂದೆ ವಿದೇಶಿ ನಿಧಿ ಪಡೆಯುವ ದೇಶವಿರೋಧಿ ಶಕ್ತಿಗಳ ಹಾಗೂ ಕಾಂಗ್ರೆಸ್ ಮತ್ತು ಎಡಪಂಥೀಯ ಸಂಘಟನೆಗಳ ಸಂಚಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಖಂಡಿಸಿದೆ. CJP ಮುಖವಾಡದ ಹಿಂದೆ ಕಾಂಗ್ರೆಸ್, SFI ಹಾಗೂ AISF ನಂತಹ ಸಂಘಟನೆಗಳು ನಿಂತು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿವೆ. ಜುಲೈ 20 ರಂದು ನಡೆದ ಸಂಸತ್ ಮುತ್ತಿಗೆಯ ಹೆಸರಿನಲ್ಲಿ ದೆಹಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಲಾಗಿದೆ ಹಾಗೂ ಕನಿಷ್ಠ 118ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ.

ಕೇಂದ್ರ ಸರ್ಕಾರವು ವಿದೇಶಿ ಅನುದಾನ ನಿಯಂತ್ರಣ ಕಾಯ್ದೆಯನ್ನು (FCRA) ಬಿಗಿಗೊಳಿಸುತ್ತಿರುವುದನ್ನು ತಡೆಯಲು ಮತ್ತು ವಿದೇಶಿ ನಿಧಿಯ ಮೇಲಿನ ತನಿಖೆಯನ್ನು ಅಡ್ಡಿಪಡಿಸಲು ಈ ಪ್ರತಿಭಟನೆಯನ್ನು ಯೋಜಿತ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ರೈತರ ಹೋರಾಟ ಹಾಗೂ ಶಾಹಿನ್ ಬಾಗ್ ಪ್ರತಿಭಟನೆಗಳಲ್ಲಿ 'ಟೂಲ್ಕಿಟ್' ಪಡೆಗಳು ಸಕ್ರಿಯವಾಗಿದ್ದ ಮಾದರಿಯಲ್ಲೇ, ಪ್ರಸ್ತುತ ಸಂಸತ್ತಿನ ಮುಂಗಾರು ಅಧಿವೇಶನದ ಸಮಯದಲ್ಲಿ ಅಡಚಣೆ ಉಂಟುಮಾಡಲು ಕೃತಕ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶೈಕ್ಷಣಿಕ ವಿಷಯಗಳನ್ನು ಮತ್ತು ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ವಿಶ್ವಗುರುವಾಗಿ ಬೆಳೆಯುತ್ತಿರುವುದನ್ನು ಸಹಿಸದ ಕೆಲವು ಅಂತರರಾಷ್ಟ್ರೀಯ ಮತ್ತು ದೇಶೀಯ ಶಕ್ತಿಗಳು ಈ ಕೃತ್ಯದ ಹಿಂದಿವೆ. ಆದ್ದರಿಂದ CJP ಹಾಗೂ ಅದಕ್ಕೆ ಬೆಂಬಲ ನೀಡುತ್ತಿರುವ ಸಂಸ್ಥೆಗಳ ವಿದೇಶಿ ಆರ್ಥಿಕ ಮೂಲಗಳ ಕುರಿತು ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿ ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಯು. ನಂದನ್ ಮಲ್ಯ ಒತ್ತಾಯಿಸಿದ್ದಾರೆ. ದೇಶದ ಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯತ್ನಿಸುವ ಶಕ್ತಿಗಳ ವಿರುದ್ಧ ಯುವ ಮೋರ್ಚಾ ಬೀದಿಗಿಳಿದು ಹೋರಾಡಲಿದೆ ಎಂದು ಎಚ್ಚರಿಸಿದ್ದಾರೆ.

Category
ಕರಾವಳಿ ತರಂಗಿಣಿ