ನವದೆಹಲಿ : ಸಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಸ್ಥಳದಲ್ಲೇ ಇರದೆ ಹೋಟೆಲ್‌ನಲ್ಲಿ ಬರ್ಗರ್ ತಿನ್ನುತ್ತಿದ್ದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪಕ್ಷದ ವಕ್ತಾರ ವಿಜೇತಾ ದಹಿಯಾ ಅವರನ್ನು ಸಿಜೆಪಿಯಿಂದ ಹೊರಹಾಕಲಾಗಿದೆ. ಈ ಬೆಳವಣಿಗೆಯ ಬಳಿಕ ವಿಡಿಯೋ ಒಂದನ್ನು ಹಂಚಿಕೊಂಡಿರುವ ದಹಿಯಾ, ತಮ್ಮ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಭಿಜಿತ್ ದಿಪ್ಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಡಿಯೋದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ವಿಜೇತಾ ದಹಿಯಾ, "ನಾನು ಆ ದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಕೆಲ ಸಮಯದ ನಂತರ ನನಗೆ ಹಸಿವಾಯಿತು, ಹೀಗಾಗಿ ತಿಂಡಿ ತಿನ್ನಲು ಹೊರಗೆ ಹೋಗಿದ್ದೆ. ಆದರೆ ನಾನು ಬರ್ಗರ್ ತಿಂದಿದ್ದನ್ನೇ ಅತಿ ದೊಡ್ಡ ಸಂಗತಿ ಎಂಬಂತೆ ಬಿಂಬಿಸಿ ನನ್ನನ್ನು ಪಕ್ಷದಿಂದ ತೆಗೆದುಹಾಕಲಾಗಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, "ಸೋನಮ್ ವಾಂಗ್‌ಚುಕ್ ಅವರು ಉಪವಾಸ ಕುಳಿತಾಗ ಅಭಿಜಿತ್ ದಿಪ್ಕೆ ಅವರ ಎದುರೇ ಕಚೋರಿ ಮತ್ತು ಸಮೋಸ ತಿನ್ನುತ್ತಿದ್ದರು, ಆಗ ನಾನು ಅವರ ಪರವಾಗಿ ನಿಂತು ಮಾತನಾಡಿದ್ದೆ. ಆದರೆ ಇಂದು ನನ್ನ ವಿಷಯದಲ್ಲಿ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ, ನನ್ನನ್ನು ಬಲಿಕುರಿಯನ್ನಾಗಿ ಮಾಡಿದರು" ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.