ಬೆಂಗಳೂರು: ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಬಿಎ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಮಾಧವರಾವ್ ಜಾಧವ್ ಅವರನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಭೇಟಿ ಮಾಡಿ ಸಾಂತ್ವನ ಹೇಳಿದರು.
ಕರ್ತವ್ಯನಿರತ ಪ್ರಾಮಾಣಿಕ ಅಧಿಕಾರಿಯ ಮೇಲೆ ನಡೆದಿರುವ ಈ ಗೂಂಡಾಗಿರಿಯನ್ನು ಶಾಸಕರು ಖಂಡಿಸಿದ್ದಾರೆ. ಇದೇ ವೇಳೆ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"ರಾಜ್ಯದ ಗೃಹ ಸಚಿವರು ಸದಾ ಕಾಲ ಆರ್‌ಎಸ್‌ಎಸ್ ಅನ್ನು ಟೀಕಿಸುವುದು ಹಾಗೂ ಬಿಜೆಪಿಯವರನ್ನು ಗುರಿಯಾಗಿಸಿಕೊಂಡು ರಾಜಕಾರಣ ಮಾಡುವುದರಲ್ಲೇ ತಮ್ಮ ಸಂಪೂರ್ಣ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಅವರು ಮೊದಲು ತಮ್ಮ ಪೊಲೀಸ್ ಇಲಾಖೆಯ ಕಡೆ ಹಾಗೂ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಕಡೆ ಗಮನ ಹರಿಸಬೇಕು.
ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಸರ್ಕಾರಿ ಅಧಿಕಾರಿಗಳ ಮೇಲೆಯೇ ಇಂತಹ ಭೀಕರ ಹಲ್ಲೆ ನಡೆಯುತ್ತಿದೆ ಎಂದರೆ, ರಾಜ್ಯದಲ್ಲಿ ಜನಸಾಮಾನ್ಯರ ಗತಿಯೇನು? ಸರ್ಕಾರ ಪುಂಡ-ಪೋಕರಿಗಳಿಗೆ ರಕ್ಷಣೆ ನೀಡುತ್ತಿದೆಯೇ?" ಎಂದು ಶಾಸಕರು ಕಿಡಿಕಾರಿದರು.
ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಅತ್ಯಂತ ಕಠಿಣ ಕ್ರಮಕ್ಕೆ ಆಗ್ರಹಿಸಿದ ಕಿಶೋರ್ ಕುಮಾರ್ ಪುತ್ತೂರು, "ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿರುವ ಎಲ್ಲಾ ಪುಂಡರನ್ನು ತಕ್ಷಣವೇ ಬಂಧಿಸಬೇಕು ಮತ್ತು ಅವರ ಮೇಲೆ ಯಾವುದೇ ಮುಲಾಜಿಲ್ಲದೆ 'ಗೂಂಡಾ ಕಾಯ್ದೆ' ದಾಖಲಿಸಬೇಕು.
ಅದರ ಜೊತೆಗೆ, ಈ ಎಲ್ಲಾ ಕೃತ್ಯಗಳ ರೂವಾರಿ ಹಾಗೂ ಈ ಪುಂಡರ ಪಡೆಯ ಮುಖ್ಯಸ್ಥನಾಗಿರುವ ಪ್ರಮುಖ ಆರೋಪಿಯ ಆಸ್ತಿಯನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವಂತಹ ದಿಟ್ಟ ಕ್ರಮವನ್ನು ಕೈಗೊಳ್ಳಬೇಕು. ಇಂತಹ ಕಠಿಣ ಕ್ರಮಗಳಿಂದ ಮಾತ್ರ ಸಮಾಜದಲ್ಲಿ ಕಾನೂನಿನ ಭಯ ಮೂಡಿಸಲು ಸಾಧ್ಯ" ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.