image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಡದಿ ಟೌನ್​​ಶಿಪ್ ವಿರುದ್ಧ ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಘೋಷಣೆ

ಬಿಡದಿ ಟೌನ್​​ಶಿಪ್ ವಿರುದ್ಧ ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಘೋಷಣೆ

ಬೆಂಗಳೂರು : ಬಿಡದಿ ಟೌನ್​​ಶಿಪ್ ಯೋಜನೆ ವಿರುದ್ಧ ಬಿಜೆಪಿ ಪಾದಯಾತ್ರೆ ಘೋಷಿಸಿದ ಬೆನ್ನಲ್ಲೇ, ಜೆಡಿಎಸ್ ಕೂಡ ಪ್ರತ್ಯೇಕವಾಗಿ ಹೋರಾಟಕ್ಕೆ ಧುಮುಕಲು ಸಜ್ಜಾಗಿದೆ. ಜುಲೈ 31ರಿಂದ ಆಗಸ್ಟ್ 1ರವರೆಗೆ ಬಿಡದಿಯಿಂದ ಬೆಂಗಳೂರಿಗೆ ಪ್ರತ್ಯೇಕ ಪಾದಯಾತ್ರೆ ನಡೆಸುವುದಾಗಿ ಜೆಡಿಎಸ್ ಪ್ರಕಟಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬೆಂಗಳೂರಿನ ಜೆ.ಪಿ. ಭವನದಲ್ಲಿ ಶನಿವಾರ ಜಂಟಿ ಮಾಧ್ಯಮಗೋಷ್ಟಿ ನಡೆಸಿದ ಜೆಡಿಎಲ್‌ಪಿ ನಾಯಕ ಸುರೇಶ ಬಾಬು ಮತ್ತು ಕೋರ್ ಕಮಿಟಿ ಅಧ್ಯಕ್ಷ ಕೃಷ್ಣ ರೆಡ್ಡಿ ಅವರು ಪಾದಯಾತ್ರೆಯ ದಿನಾಂಕವನ್ನು ಅಧಿಕೃತಗೊಳಿಸಿದರು. ಟೌನ್​​ಶಿಪ್ ಯೋಜನೆಯ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮೊದಲು ಸಂಚರಿಸಿ ರೈತರ ಸಮಸ್ಯೆಗಳನ್ನು ಆಲಿಸಲಿರುವ ದಳಪತಿಗಳು, ಬಳಿಕ ಬಿಡದಿಯ ಭೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಪಾದಯಾತ್ರೆ ನಡೆಸಲಿದ್ದಾರೆ‌.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ಬಿಡದಿ ಟೌನ್​​ಶಿಪ್ ಯೋಜನೆಗೆ ಕೇವಲ ಶೇ. 9 ರಷ್ಟು ಜನರಿಂದ ಮಾತ್ರ ಒಪ್ಪಿಗೆ ಸಿಕ್ಕಿದೆ. ಅಲ್ಲಿನ ರೈತರು ಹೈನುಗಾರಿಕೆ ಹಾಗೂ ವ್ಯವಸಾಯ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್​​ ಅವರು ಕೊಡುವವರು ಕೊಡಿ, ಬೇಡವಾದವರು ಬಿಡಿ ಎನ್ನುವ ಮೂಲಕ ರೈತರಲ್ಲಿ ದ್ವಂದ್ವ ನಿಲುವು ತಳೆದು ಗೊಂದಲ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ರೈತರ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದ್ದು, ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಬಿಜೆಪಿ ಪಾದಯಾತ್ರೆ ಕುರಿತು ಮಾತನಾಡಿದ ಸುರೇಶ್ ಬಾಬು, ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ರೈತರ ಪರ ನಾಯಕರಾಗಿದ್ದು, ಅವರೂ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಜೆಡಿಎಸ್ ಮೊದಲಿನಿಂದಲೂ ಈ ಹೋರಾಟದಲ್ಲಿದೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ನಾಯಕರು ಒಟ್ಟಿಗೆ ಕುಳಿತು ಚರ್ಚಿಸಿ, ಮುಂದಿನ ಹೋರಾಟದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಬಹುದು ಎಂದು ಸುಳಿವು ನೀಡಿದರು.

Category
ಕರಾವಳಿ ತರಂಗಿಣಿ