image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯ ಸಂಪುಟ ವಿಸ್ತರಣೆ : ಹೈಕಮಾಂಡ್‌ನಿಂದ 'ನವಚೈತನ್ಯ' ಸೂತ್ರ ಸಿದ್ಧ!

ರಾಜ್ಯ ಸಂಪುಟ ವಿಸ್ತರಣೆ : ಹೈಕಮಾಂಡ್‌ನಿಂದ 'ನವಚೈತನ್ಯ' ಸೂತ್ರ ಸಿದ್ಧ!

ಬೆಂಗಳೂರು : ರಾಜ್ಯದಲ್ಲಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮೊದಲ ಹಂತದ ಕಸರತ್ತು ಮುಕ್ತಾಯಗೊಂಡಿದ್ದು, ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ‘ನವಚೈತನ್ಯ’ದ ಹೊಸ ಸೂತ್ರವನ್ನು ಹೆಣೆದಿದೆ. ಸಂಪುಟದಲ್ಲಿ ಶೇ. 40ರಷ್ಟು ಹಿರಿಯರು ಹಾಗೂ ಶೇ. 60ರಷ್ಟು ಹೊಸಬರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದ್ದು, ಖಾಲಿ ಇರುವ 20 ಸ್ಥಾನಗಳ ಪೈಕಿ ಒಮ್ಮೆಯೂ ಸಚಿವರಾಗದ 16 ಮಂದಿಗೆ ಹಾಗೂ ಉಳಿದ 4 ಸ್ಥಾನಗಳನ್ನು ಹಿರಿಯರಿಗೆ ಹಂಚಿಕೆ ಮಾಡಿ ಸಮತೋಲನ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ. ಪ್ರಸ್ತುತ ಭರ್ತಿಯಾಗಿರುವ 13 ಸ್ಥಾನಗಳಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಉಳಿದ 12 ಮಂದಿ ಹಳಬರೇ ಇದ್ದಾರೆ.

ಸಂಪುಟ ರಚನೆಯಲ್ಲಿ ಜಾತಿ ಮತ್ತು ಪ್ರಾದೇಶಿಕ ಸಮೀಕರಣಕ್ಕೂ ಹೈಕಮಾಂಡ್ ಹೆಚ್ಚಿನ ಆದ್ಯತೆ ನೀಡಿದೆ. ಖಾಲಿ ಇರುವ ಸ್ಥಾನಗಳಲ್ಲಿ 8 ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲು ನಿರ್ದೇಶಿಸಿದ್ದು, ಉಳಿದ 12 ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳಾ ಕೋಟಾದಡಿ ಭರ್ತಿ ಮಾಡಲು ಸೂಚಿಸಿದೆ. ಇದರೊಂದಿಗೆ ಪ್ರಾದೇಶಿಕತೆಗೂ ಮನ್ನಣೆ ನೀಡಬೇಕು ಎಂಬ ಫರ್ಮಾನನ್ನು ಹೊರಡಿಸಲಾಗಿದೆ. ಆದರೆ, ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಮಂತ್ರಿ ಸ್ಥಾನದ ಉತ್ಸಾಹದಲ್ಲಿದ್ದವರಿಗೆ ಸದ್ಯಕ್ಕೆ ಅವಕಾಶ ನೀಡದಿರಲು ಹೈಕಮಾಂಡ್ ತಡೆ ಹಾಕಿದೆ. ಗುರುವಾರ ರಾತ್ರಿ ದೆಹಲಿಯ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಶಾಸಕರಿಗೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿಯಲ್ಲಿ ಪ್ರಾಥಮಿಕ ಚರ್ಚೆಗಳು ಮುಗಿದಿದ್ದು, ಸೋಮವಾರದ ಬಳಿಕವೇ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ. ಶಿವಕುಮಾರ್, ದೆಹಲಿ ನಾಯಕರು ತಮಗೆ ನೀಡಬೇಕಾದ ನಿರ್ದೇಶನಗಳನ್ನು ನೀಡಿದ್ದಾರೆ, ಖರ್ಗೆ ಅವರು ಬಂದ ಬಳಿಕ ಅಂತಿಮ ತೀರ್ಮಾನ ಹೊರಬೀಳಲಿದ್ದು ತಾವು ಸಂಪುಟ ವಿಸ್ತರಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಖಾಸಗಿ ಕೆಲಸ ಹಾಗೂ ಆಸ್ಪತ್ರೆಗೆ ಭೇಟಿ ನೀಡಲು ಬೆಂಗಳೂರಿಗೆ ಬಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಂಪುಟ ವಿಸ್ತರಣೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ದೆಹಲಿ ನಾಯಕರು ಬಂದ ಬಳಿಕ ಅವರನ್ನೇ ಕೇಳಿ ಎಂದು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಶಿವಕುಮಾರ್ ಈಗಾಗಲೇ ಬೆಂಗಳೂರಿಗೆ ಮರಳಿದ್ದರೂ, ಕೆಲವು ಸಚಿವಾಕಾಂಕ್ಷಿಗಳು ಇನ್ನೂ ದೆಹಲಿಯಲ್ಲೇ ಬೀಡುಬಿಟ್ಟು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ