image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಾತಿ ಗಣತಿ ವರದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಜಂಟಿ ವಾಗ್ದಾಳಿ

ಜಾತಿ ಗಣತಿ ವರದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಜಂಟಿ ವಾಗ್ದಾಳಿ

ಮಂಗಳೂರು: ರಾಜ್ಯ ಸರ್ಕಾರದ ಬಹುಚರ್ಚಿತ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಯನ್ನು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಕಡ್ಡಾಯವಾಗಿ ಮಂಡಿಸಿ, ವಿಸ್ತೃತ ಚರ್ಚೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ಹಾಗೂ ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಭಯ ನಾಯಕರು, ಹಿಂದುಳಿದ ವರ್ಗಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ಕೇವಲ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ಗೆ ಹಿಂದುಳಿದ ವರ್ಗಗಳ ಬಗ್ಗೆ ನೈಜ ಕಾಳಜಿ ಇಲ್ಲ ಎಂದು ಟೀಕಿಸಿದ ಎಂ.ಎಲ್.ಸಿ ಕೇಶವ ಪ್ರಸಾದ್, ಹಿಂದೆ ಕಾಕಾ ಕಾಲೇಲ್ಕರ್ ವರದಿ ಅಥವಾ ಮಂಡಲ್ ಆಯೋಗದ ವರದಿ ಜಾರಿಗೊಳಿಸುವಲ್ಲಿಯೂ ಕಾಂಗ್ರೆಸ್ ವಿಫಲವಾಗಿತ್ತು ಎಂದು ನೆನಪಿಸಿದರು. ಡಿ. ದೇವರಾಜ ಅರಸು ಅವರು ಎಲ್.ಜಿ. ಹಾವನೂರು ವರದಿಯನ್ನು ಜಾರಿಗೊಳಿಸಿದ ಮಾದರಿಯಲ್ಲಿಯೇ ಈ ವರದಿಯನ್ನೂ ಜಾರಿಗೊಳಿಸಬಹುದಿತ್ತು, ಆದರೆ ಸರ್ಕಾರ ಇಚ್ಛಾಶಕ್ತಿಯ ಕೊರತೆಯನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದರು. ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಖರ್ಚು ಮಾಡಿ ಸಿದ್ಧಪಡಿಸಿದ ವರದಿಯ ದತ್ತಾಂಶಗಳು ಹಳೆಯದಾಗಿವೆ ಎಂದು ಸ್ವತಃ ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ಇಂತಹ ಹಳೆಯ ದತ್ತಾಂಶಗಳ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ಮಾತನಾಡಿದ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು, ಸರ್ಕಾರವು ಈ ವರದಿಯನ್ನು ಕೇವಲ 'ಜಾತಿಯ ಸಮೀಕ್ಷೆ'ಯಾಗಿ ನೋಡದೆ, 'ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ'ಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ತಾವೊಬ್ಬ ಹಿಂದುಳಿದ ನಾಯಕ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರಿಗೆ ನಿಜವಾದ ಕಾಳಜಿ ಇದ್ದರೆ, ಮುಂಬರುವ ಅಧಿವೇಶನದಲ್ಲಿ ಕನಿಷ್ಠ 2-3 ದಿನಗಳ ಕಾಲ ವರದಿಯ ಕುರಿತು ಸುದೀರ್ಘ ಚರ್ಚೆಗೆ ಅವಕಾಶ ನೀಡಬೇಕು ಎಂದು ಸವಾಲು ಹಾಕಿದರು. ಸಾರ್ವಜನಿಕ ವೇದಿಕೆಗಳಲ್ಲಿ ಆರ್ಭಟ ಮಾಡುವುದನ್ನು ಬಿಟ್ಟು, ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ನೈಜ ಸುಧಾರಣೆಗೆ ಸರ್ಕಾರ ಬದ್ಧವಾಗಬೇಕು ಎಂದ ಅವರು, ಭವಿಷ್ಯದಲ್ಲಿ ಅಧಿಕಾರ ಬದಲಾವಣೆಯಾದರೆ ಈ ವರದಿಯ ಗತಿ ಏನಾಗಲಿದೆ ಎಂದು ಕಾದು ನೋಡಬೇಕಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ರಾಜ್ಯ OBC ಮೋರ್ಚಾ ಕಾರ್ಯದರ್ಶಿ ಆರ್.ಸಿ ನಾರಾಯಣ್, OBC ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಕಲ್ಮಂಜ, ಮೋನಪ್ಪ ದೇವಸ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಿತೀನ್ ಕುಮಾರ್, ಮಾಜಿ ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಹಾಗೂ ಜಿಲ್ಲಾ ಮಾಧ್ಯಮ ಪ್ರಮುಖ್ ವಸಂತ್ ಪೂಜಾರಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ