image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಆರ್‌ಸಿ ರದ್ದುಗೊಳಿಸಲು ಆಗ್ರಹಿಸಿ ರಾಜ್ಯಪಾಲರಿಗೆ ಬಿಜೆಪಿ ನಿಯೋಗದ ಮನವಿ

ಪಿಆರ್‌ಸಿ ರದ್ದುಗೊಳಿಸಲು ಆಗ್ರಹಿಸಿ ರಾಜ್ಯಪಾಲರಿಗೆ ಬಿಜೆಪಿ ನಿಯೋಗದ ಮನವಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಜೂನ್ 26, 2026ರಂದು ಹೊರಡಿಸಿರುವ 'ಶಾಶ್ವತ ನಿವಾಸ ಪ್ರಮಾಣಪತ್ರ' (PRC) ನೀಡುವ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಲು ಹಾಗೂ ಸೂಕ್ತ ಸಾಂವಿಧಾನಿಕ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡಬೇಕೆಂದು ಕೋರಿ ರಾಜ್ಯ ಬಿಜೆಪಿ ನಿಯೋಗವು ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಲೋಕಭವನದಲ್ಲಿ ಅಧಿಕೃತ ಮನವಿ ಸಲ್ಲಿಸಿದೆ. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ ಹಾಗೂ ಎನ್. ರವಿಕುಮಾರ್ ನೇತೃತ್ವದ ನಿಯೋಗವು ಈ ಅಧಿಸೂಚನೆಗೆ ಸಂಬಂಧಿಸಿದಂತೆ ಗಂಭೀರ ಆಕ್ಷೇಪಣೆಗಳನ್ನು ಎತ್ತಿದೆ.

ವಿದೇಶಿಯರನ್ನು ಗುರುತಿಸುವುದು, ಪೌರತ್ವ ಹಾಗೂ ವಲಸೆಗೆ ಸಂಬಂಧಿಸಿದ ವಿಷಯಗಳು ಭಾರತದ ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ಅನನ್ಯ ಅಧಿಕಾರ ವ್ಯಾಪ್ತಿಗೆ (Union List) ಒಳಪಡುತ್ತವೆ. ಹೀಗಿರುವಾಗ 'ಶಾಶ್ವತ ನಿವಾಸಿ' ಎಂಬ ಹೊಸ ವರ್ಗವನ್ನು ಸೃಷ್ಟಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಸಾಂವಿಧಾನಿಕ ಅಥವಾ ಕಾನೂನುಬದ್ಧ ಅಧಿಕಾರವಿಲ್ಲ ಎಂದು ಬಿಜೆಪಿ ಆಕ್ಷೇಪಿಸಿದೆ. ಪ್ರಸ್ತುತ ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಸಡಿಲ ನಿಯಮಗಳನ್ನು ಜಾರಿಗೊಳಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅಕ್ರಮ ವಲಸಿಗರು ನಕಲಿ ದಾಖಲೆಗಳ ಮೂಲಕ ಈ ಪ್ರಮಾಣಪತ್ರ ಪಡೆದು ಮತದಾನದ ಹಕ್ಕು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಅನಧಿಕೃತವಾಗಿ ಪಡೆಯುವ ದಟ್ಟ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಈ ಪ್ರಮಾಣಪತ್ರವನ್ನು ವಿತರಿಸುವ ಸಂಪೂರ್ಣ ಜವಾಬ್ದಾರಿಯನ್ನು ಕಂದಾಯ ಅಧಿಕಾರಿಗಳಿಗೆ ನೀಡಿರುವುದರಿಂದ ಭ್ರಷ್ಟಾಚಾರ ಹಾಗೂ ನಕಲಿ ದಾಖಲೆಗಳ ಸೃಷ್ಟಿಗೆ ಇದು ಹಾದಿ ಮಾಡಿಕೊಡಲಿದೆ. ಈಗಾಗಲೇ ನ್ಯಾಯಾಲಯ ಹಾಗೂ ಲೋಕ ಅದಾಲತ್‌ಗಳ ಮೂಲಕ ಅನುಮಾನಾಸ್ಪದ ರೀತಿಯಲ್ಲಿ ಜನನ ಪ್ರಮಾಣಪತ್ರಗಳನ್ನು ಪಡೆದಿರುವ ಗಂಭೀರ ಆರೋಪಗಳಿದ್ದು, ಈ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, 2002ರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ನಿಯಮಗಳ ಪ್ರಕಾರ, 1987ರ ನಂತರ ಜನಿಸಿದ ನಾಗರಿಕರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಪೋಷಕರು ಅಥವಾ ಹಿರಿಯರ ಹೆಸರು 2002ರ ಪಟ್ಟಿಯಲ್ಲಿರುವುದನ್ನು ದೃಢೀಕರಿಸುವ ಅತ್ಯಂತ ಸುರಕ್ಷಿತ ಹಾಗೂ ಪಾರದರ್ಶಕ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಹೀಗಿರುವಾಗ ಜನರಲ್ಲಿ ಗೊಂದಲ ಮೂಡಿಸುವ ಹೊಸ ಪಿಆರ್‌ಸಿ ವ್ಯವಸ್ಥೆಯನ್ನು ಜಾರಿಗೆ ತರುವ ಯಾವುದೇ ಸಮರ್ಥನೀಯ ಅಗತ್ಯ ಕಂಡುಬರುತ್ತಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ರಾಜ್ಯದ ಹಿತರಕ್ಷಣೆ ಹಾಗೂ ದೇಶದ ಭದ್ರತೆಯ ಹಿತದೃಷ್ಟಿಯಿಂದ ಸಾಂವಿಧಾನಿಕ ಮೌಲ್ಯಗಳ ರಕ್ಷಕರಾದ ರಾಜ್ಯಪಾಲರು ಈ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ನಿಯೋಗ ಮನವಿ ಮಾಡಿದೆ. ಈ ಅಧಿಸೂಚನೆ ಹೊರಡಿಸುವ ಮುನ್ನ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿದೆಯೇ ಮತ್ತು ಭಾರತೀಯ ಪೌರತ್ವ ಪರಿಶೀಲಿಸಲು ಯಾವ ಕಡ್ಡಾಯ ಪ್ರಕ್ರಿಯೆ ಅನುಸರಿಸಿದೆ ಎಂಬ ಕುರಿತು ವಿವರವಾದ ವರದಿಯನ್ನು ತರಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ. ಜೊತೆಗೆ, ಈ ವಿವಾದಾತ್ಮಕ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಇತ್ತೀಚಿನ ಎಸ್‌ಐಆರ್ (SIR) ಪ್ರಕ್ರಿಯೆ ಆರಂಭವಾದ ನಂತರ ನ್ಯಾಯಾಲಯಗಳು ಹಾಗೂ ಲೋಕ ಅದಾಲತ್‌ಗಳ ಮೂಲಕ ವಿತರಿಸಲಾಗಿರುವ ಜನನ ಪ್ರಮಾಣಪತ್ರಗಳ ಸತ್ಯಾಸತ್ಯತೆಯ ಕುರಿತು ಸಮಗ್ರ ತನಿಖೆ ನಡೆಸಲು ಸಂಬಂಧಿತ ತನಿಖಾ ಸಂಸ್ಥೆಗಳಿಗೆ ಆದೇಶಿಸಬೇಕು ಎಂದು ಬಿಜೆಪಿ ನಿಯೋಗವು ರಾಜ್ಯಪಾಲರನ್ನು ಆಗ್ರಹಿಸಿದೆ.

Category
ಕರಾವಳಿ ತರಂಗಿಣಿ