ಬೆಂಗಳೂರು: ರಾಜ್ಯ ಸರ್ಕಾರವು 'ಭಾರತ್ ಜೋಡೋ ಯುವ ಸಂಘ'ಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ನಿರುದ್ಯೋಗಿ ಕಾರ್ಯಕರ್ತರಿಗೆ ಗಂಜಿ ಕೇಂದ್ರ ಹಾಗೂ ಪುನರ್ವಸತಿ ಕಲ್ಪಿಸಲು ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ತೆರಿಗೆದಾರರ ಬೆವರಿನ ಹಣವನ್ನು ಕಾಂಗ್ರೆಸ್ ಪಕ್ಷದ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ರೈತರು, ವೃದ್ಧರು, ವಿಧವೆಯರು ಹಾಗೂ ಅನಾಥರಿಗೆ ನೀಡಬೇಕಾದ ಪಿಂಚಣಿ ಮತ್ತು ಸಹಾಯಧನವನ್ನು ತಡೆಹಿಡಿದಿರುವ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಹಾಗೂ ಅನ್ನಭಾಗ್ಯ ಯೋಜನೆಯ 750 ಕೋಟಿ ರೂ. ಹಣವನ್ನು ಫಲಾನುಭವಿಗಳಿಗೆ ಇನ್ನು ನೀಡಿಲ್ಲ. ಅನಾಥ ಮಕ್ಕಳಿಗೆ ನೀಡಬೇಕಾದ 78 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರಿಗೆ ಮಾಸಿಕ ಸಂಬಳ, ಸೌಲಭ್ಯಗಳು ಸೇರಿದಂತೆ ವಾರ್ಷಿಕ ಸುಮಾರು 2 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಭತ್ಯೆ ಸೇರಿದಂತೆ ತಿಂಗಳಿಗೆ 150 ಕೋಟಿ ರೂ.ಗೂ ಹೆಚ್ಚು ಸಾರ್ವಜನಿಕ ಹಣ ಪೋಲಾಗುತ್ತಿದೆ. ಇದೀಗ 'ಭಾರತ್ ಜೋಡೋ' ಹೆಸರಿನಲ್ಲಿ ಹೊಸ ಸಂಘಗಳನ್ನು ರಚಿಸಿ, 1,010 ಕೋಟಿ ರೂ. ವೆಚ್ಚದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ 24,000 ರೂ. ವೇತನದ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಟೀಕಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಔಷಧ ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಈ ಹಣವನ್ನು ಅಲ್ಲಿಗೆ ನೀಡಿದ್ದರೆ ಬಡ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಅತೃಪ್ತ ಕಾಂಗ್ರೆಸ್ಸಿಗರಿಗಾಗಿ ಇಂತಹ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಬರ ಹಾಗೂ ನೀರಿಲ್ಲದೆ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಇನ್ನೂ ಸೂಕ್ತ ಪರಿಹಾರ ನೀಡಿಲ್ಲ. ಹಳ್ಳಿಗಳಲ್ಲಿ ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ನಿರ್ಮಿಸದ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ದೂರಿದರು. ಇದೇ ವೇಳೆ ಬಿಡದಿ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಸುಳ್ಳು ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿದ ಅಶೋಕ್, ರೈತರ ಹೋರಾಟಕ್ಕೆ ತಾವೂ ಸಂಪೂರ್ಣ ಬೆಂಬಲ ನೀಡುವುದಾಗಿ ಹಾಗೂ ರೈತರ ವಿರುದ್ಧದ ಎಫ್‌ಐಆರ್‌ಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.