image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ಮರಳುವ ಸೂಚನೆ: ಕಾಂಗ್ರೆಸ್ ಸರ್ಕಾರಕ್ಕೆ ನೇರ ಸವಾಲು

ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ಮರಳುವ ಸೂಚನೆ: ಕಾಂಗ್ರೆಸ್ ಸರ್ಕಾರಕ್ಕೆ ನೇರ ಸವಾಲು

ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತ ಚರ್ಚೆಗಳಿಗೆ ತಾವೇ ಸ್ವತಃ ತೆರೆ ಎಳೆದಿದ್ದು, ಭವಿಷ್ಯದಲ್ಲಿ ಕರ್ನಾಟಕ ರಾಜಕಾರಣಕ್ಕೆ ವಾಪಸ್ ಬರುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ತಕ್ಷಣವೇ ತಾವು ಮರಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸದ್ಯಕ್ಕೆ ಕೇಂದ್ರ ಸಚಿವನಾಗಿ ಮೂರು ವರ್ಷಗಳ ಅಧಿಕಾರಾವಧಿ ಬಾಕಿ ಇದೆ ಎಂದರು. ಕೇಂದ್ರದ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದ ಅವರು, ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ತಾವು ಸಕ್ರಿಯವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಹಿರಿಯೂರು ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎನ್‌ಡಿಎ ಹೈಕಮಾಂಡ್‌ಗೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಹೆಚ್‌ಎಂಟಿ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ತೀವ್ರವಾಗಿ ಕಿಡಿಕಾರಿದ ಕುಮಾರಸ್ವಾಮಿ, ಹೆಚ್‌ಎಂಟಿ ಭೂಮಿಯನ್ನು ಮುಟ್ಟಲು ಸಾಧ್ಯವಿಲ್ಲ, ಕೋರ್ಟ್ ಸ್ಟೇ ನೀಡಿದೆ ಎಂದು ಎಚ್ಚರಿಸಿದರು. ಅರಣ್ಯ ಸಚಿವರು ಕೇವಲ ಹೆಚ್‌ಎಂಟಿ ಮತ್ತು ಕುದುರೆಮುಖ ಬಗ್ಗೆ ಮಾತ್ರ ಮಾತನಾಡುತ್ತಿರುವುದನ್ನು ಪ್ರಶ್ನಿಸಿದ ಅವರು, ಮೊದಲು ಬೇರೆಯವರಿಗೆ ನೀಡಿರುವ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿ ಎಂದು ಸವಾಲು ಹಾಕಿದರು. ಬೆಂಗಳೂರು ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ. ನೀಡುವ ಸರ್ಕಾರದ ಘೋಷಣೆಯನ್ನು ಲೇವಡಿ ಮಾಡಿದ ಅವರು, ಜನರ ಮೇಲೆ ಸಾಲದ ಹೊರೆ ಹಾಕಿ ಬೆಂಗಳೂರು ಉದ್ದಾರ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಅಲ್ಲದೆ, ಸರ್ಕಾರದ 15 ಲಕ್ಷ ಸಸಿ ನೆಡುವ ಗಿನ್ನೆಸ್ ದಾಖಲೆಯ ಪ್ರಯತ್ನವನ್ನು ವ್ಯಂಗ್ಯವಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಕಾಲದ ಟೆಂಡರ್ ಕ್ಯಾನ್ಸಲ್ ಮಾಡಿ ಡಿ.ಕೆ. ಶಿವಕುಮಾರ್ ಮರು ಟೆಂಡರ್ ಮಾಡಿರುವ ವಿಚಾರದ ಬಗ್ಗೆ ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಿಚ್ಚಿಡುವುದಾಗಿ ಮಾರ್ಮಿಕವಾಗಿ ನುಡಿದರು.

Category
ಕರಾವಳಿ ತರಂಗಿಣಿ