image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗ್ಯಾರಂಟಿ ಯೋಜನೆ ನಿಲ್ಲಿಸಿ ರೈತರ ಸಾಲ ಮನ್ನಾ ಮಾಡಿ: ಸರ್ಕಾರಕ್ಕೆ ಶಾಸಕ ಶರಣಗೌಡ ಕಂದಕೂರ ಸಲಹೆ

ಗ್ಯಾರಂಟಿ ಯೋಜನೆ ನಿಲ್ಲಿಸಿ ರೈತರ ಸಾಲ ಮನ್ನಾ ಮಾಡಿ: ಸರ್ಕಾರಕ್ಕೆ ಶಾಸಕ ಶರಣಗೌಡ ಕಂದಕೂರ ಸಲಹೆ

ಹೊನಗೇರಾ : ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ತೀವ್ರ ಸಂಕಷ್ಟದಲ್ಲಿದ್ದು, ಒಂದು ವರ್ಷದ ಮಟ್ಟಿಗೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿಯಾದರೂ ಸರ್ಕಾರ ತಕ್ಷಣವೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಗುರುಮಿಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ತಮ್ಮ ಮತಕ್ಷೇತ್ರದ ಹೊನಗೇರಾ, ಆಶನಾಳ ಹಾಗೂ ಯಡ್ಡಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ಹಿಂದೆ ಕೇವಲ 38 ಶಾಸಕರನ್ನು ಹೊಂದಿದ್ದ ಜೆಡಿಎಸ್ ಪಕ್ಷವು ರೈತರ ಅಭಿವೃದ್ಧಿಗಾಗಿ ಕೇವಲ 14 ತಿಂಗಳ ಅಧಿಕಾರಾವಧಿಯಲ್ಲಿ ಸಾಲ ಮನ್ನಾ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸಿತ್ತು. ಆದರೆ 138 ಶಾಸಕರ ಬಲ ನೀಡಿ ಅಧಿಕಾರಕ್ಕೆ ತಂದ ಜನರಿಗೆ ಕಾಂಗ್ರೆಸ್ ನೇತೃತ್ವದ ಇಂದಿನ ಸರ್ಕಾರ ಏನು ಮಾಡಿದೆ ಎಂದು ಅವರು ಪ್ರಶ್ನಿಸಿದರು.

ಹತ್ತಿಕುಣಿ ಡ್ಯಾಮ್ ನವೀಕರಣ ಮತ್ತು ಕೆಳಹಂತದ ರೈತರಿಗೆ ನೀರಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾಲಾ ಆಧುನೀಕರಣ ಕಾಮಗಾರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು 75 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಈ ಕೊಡುಗೆಯನ್ನು ರೈತರು ಎಂದಿಗೂ ಮರೆಯಬಾರದು ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಯಾದಗಿರಿ-ಹೈದರಾಬಾದ್ ಮುಖ್ಯ ರಸ್ತೆಯಿಂದ ಆಶನಾಳ ಗ್ರಾಮದವರೆಗೆ 1 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಜೊತೆಗೆ ಆಶನಾಳ ಪ್ರಾಥಮಿಕ ಶಾಲೆಯ 4 ಕೊಠಡಿಗಳ ನಿರ್ಮಾಣ, ರಸ್ತೆ ಚರಂಡಿ, ಬ್ರಿಡ್ಜ್ ರಸ್ತೆ ಸುಧಾರಣೆ, ಸಿಸಿ ರಸ್ತೆ ಹಾಗೂ ವಾಲ್ಮೀಕಿ ಸಮುದಾಯ ಭವನಕ್ಕೆ ನೀಡಿರುವ ಅನುದಾನಗಳ ಕುರಿತು ಶಾಸಕರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ಮಹಾದೇವ, ಪಿಡಬ್ಲ್ಯುಡಿ ಎಇಇ ಕೈಲಾಶ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಹೂಗಾರ, ಜೆಸ್ಕಾಂ ಅಧಿಕಾರಿಗಳು, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶಚಂದ್ರ ಕಟಕಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ