image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಜೆಪಿ ವಿರುದ್ಧ ಬಿ ರಮಾನಾಥ್ ರೈ ಆಕ್ರೋಶ

ಬಿಜೆಪಿ ವಿರುದ್ಧ ಬಿ ರಮಾನಾಥ್ ರೈ ಆಕ್ರೋಶ

ಮಂಗಳೂರು : ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಬಿಜೆಪಿ ಮುಖಂಡರು ಮೂರ್ಖತನದ ಮಾತುಗಳನ್ನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ರಮಾನಾಥ್ ರೈ ತೀವ್ರವಾಗಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಬೇರೆ ದೇಶದವರನ್ನು ಮತದಾರರ ಪಟ್ಟಿಗೆ ಸೇರಿಸುತ್ತಾರೆ ಮತ್ತು ಮಸೀದಿಗಳ ಹೆಸರನ್ನು ಬಳಸಿ ಸಾಮೂಹಿಕವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿಯೇ ಎಸ್‌ಐಆರ್ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವಾಗ, ಬಿಜೆಪಿಯವರ ಈ ಮಾತುಗಳು ತಲೆಬುಡ ಇಲ್ಲದ ಸಂಗತಿಯಾಗಿದೆ. ಬಿಎಲ್‌ಒಗಳು ಹಲವಾರು ಕಷ್ಟಗಳ ನಡುವೆಯೂ ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಈ ಕೆಲಸದಲ್ಲೂ ತಮ್ಮ ರಾಜಕೀಯ ಹಾಗೂ ಮತೀಯ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿಯೂ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದು, ಇದು 11ನೇ ಎಸ್‌ಐಆರ್ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ತಮ್ಮ ಅನುಭವದ ಪ್ರಕಾರ, ಹಿಂದೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕಾನಿಷಾರಿ ಹೆಸರಿನಲ್ಲಿ ನಡೆಸಲಾಗುತ್ತಿತ್ತು. ಈ ರೀತಿ ಎನ್ಯುಮರೇಶನ್ ಫಾರಂಗೆ ಸಹಿ ಹಾಕಿಸಿಕೊಂಡು ನಡೆಸುವ ಪ್ರಕ್ರಿಯೆ ಹಿಂದೆಂದೂ ನಡೆದಿಲ್ಲ, ಇದು ತಮಗೂ ಹೊಸ ಅನುಭವ ಎಂದು ರಮಾನಾಥ್ ರೈ ತಿಳಿಸಿದ್ದಾರೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸಾಕಷ್ಟು ದಾಖಲೆ, ಪುರಾವೆಗಳನ್ನು ನೀಡಬೇಕು, ಆದರೆ ಪಟ್ಟಿಯಿಂದ ಹೆಸರು ತೆಗೆದು ಹಾಕುವುದು ಸುಲಭವಾಗಿದ್ದು, ಬಿಜೆಪಿಯವರು ಅದನ್ನೇ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಎಲ್‌ಒಗಳ ಜೊತೆ ಎಲ್ಲಾ ಪಕ್ಷದ ಬಿಎಲ್‌ಎಗಳಿಗೂ ಮನೆ ಮನೆಗೆ ಭೇಟಿ ನೀಡಲು ಚುನಾವಣಾ ಆಯೋಗದಿಂದ ಅವಕಾಶ ನೀಡಲಾಗಿದೆ. ಪಕ್ಷದಿಂದಲೂ ಬಿಎಲ್‌ಎಗಳಿಗೆ ಅಗತ್ಯ ಮಾಹಿತಿ ಹಾಗೂ ಜಾಗೃತಿ ಒದಗಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಬಿಎಲ್‌ಒಗಳ ಮೂಲಕವೂ ಪಕ್ಷಾತೀತವಾಗಿ ಬಿಎಲ್‌ಎಗಳಿಗೆ ಮಾಹಿತಿ ತಲುಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಹರಿನಾಥ್, ಮಮತಾ ಗಟ್ಟಿ, ಮಂಜುಳಾ ನಾಯಕ್, ವಿಕಾಸ್ ಶೆಟ್ಟಿ, ಶುಭೋದಯ ಆಳ್ವ, ಹೊನ್ನಯ್ಯ, ಪದ್ಮನಾಭ, ಗೀತಾ, ಸಚಿನ್, ಯೋಗೇಶ್, ಶಬೀರ್, ಸುಹಾನ್ ಆಳ್ವ, ಜೋಕಿಂ, ಪ್ರಸಾದ್ ಜೈನ್, ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ