ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಓಲೈಕೆ ರಾಜಕಾರಣದ ಪರಮಾವಧಿಯಾಗಿದ್ದು, ಇದರಿಂದ ರಾಜ್ಯಕ್ಕೆ ಎದುರಾಗಲಿರುವ ಗಂಡಾಂತರದ ನೇರ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಭಾರೀ ದೊಡ್ಡ ಕೋಮುಗಲಭೆಗೆ ಸಂಚು ರೂಪಿಸಿ ನೂರಾರು ಜನ ಮತಾಂಧರು ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿದ್ದು, ಕಲ್ಲು ತೂರಾಟ ನಡೆಸಿದ್ದು, ಪೊಲೀಸರ ಕೊಲೆಗೆ ಯತ್ನಿಸಿದ್ದು ಸೇರಿದಂತೆ ಹಲವು ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯಡಿ ಗಲಭೆಕೋರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಎನ್‌ಐಎ ಆ ಪ್ರಕರಣದ ತನಿಖೆ ನಡೆಸುತ್ತಿದ್ದು ಕೆಲವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೂಡಾ ತಿರಸ್ಕರಿಸಿದೆ. ಅಂತಹ ಗಂಭೀರ ಪ್ರಕರಣವನ್ನೇ ಕೇವಲ ಓಲೈಕೆ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರ ಹಿಂಪಡೆದಿರುವುದು ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನೇ ಕುಸಿಯುವಂತೆ ಮಾಡಿರುವುದು ಮಾತ್ರವಲ್ಲದೇ ಇಡೀ ರಾಜ್ಯದ ಪಾಲಿಗೆ ತೀವ್ರ ಕಳವಳಕಾರಿ ಸಂಗತಿಯಾಗಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಮುಡಾ ಹಗರಣದಲ್ಲಿ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗುತ್ತಿದ್ದಂತೆ ಗಲಭೆಕೋರರ ಕೇಸ್ ವಾಪಸ್ ಪಡೆದು ಮೂಡಾ ಹಗರಣದ ದಿಕ್ಕು ತಪ್ಪಿಸಲು ಇಂತಹ ಮಟ್ಟಕ್ಕೆ ಇಳಿದಿರುವುದು ದುರಂತ. ಈ ನಡುವೆ ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳು, ಮಲ್ಪೆಯಲ್ಲಿ ಬಾಂಗ್ಲಾದೇಶೀ ಪ್ರಜೆಗಳು ಸಿಕ್ಕಿ ಬೀಳುತ್ತಿರುವುದು ಅವರಿಗೆಲ್ಲ ಕರ್ನಾಟಕವು ಅತ್ಯಂತ ಸುರಕ್ಷಿತ ತಾಣವಾಗಿ ಮಾರ್ಪಾಡಾಗಿದೆ. ಸರ್ಕಾರ ಅವರುಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುವ ಬದಲು ಓಲೈಕೆ ರಾಜಕಾರಣ ಮಾಡಿದರೂ ಅಚ್ಚರಿಯಿಲ್ಲ ಎಂದರು.