image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಜೆಪಿಯಿಂದ ಅಯೋಧ್ಯೆ ದೇಣಿಗೆ ಲೂಟಿ: ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ

ಬಿಜೆಪಿಯಿಂದ ಅಯೋಧ್ಯೆ ದೇಣಿಗೆ ಲೂಟಿ: ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಯೋಧ್ಯೆ ರಾಮ ಮಂದಿರದ ಹೆಸರಿನಲ್ಲಿ ಸಂಗ್ರಹವಾದ ಸುಮಾರು 20,000 ಕೋಟಿ ರೂ. ದೇಣಿಗೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಲೂಟಿ ಮಾಡಿದೆ ಎಂದು ಗಂಭೀರವಾಗಿ ಆಪಾದಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ, ದೇವರ ಹೆಸರನ್ನೇ ಜಪಿಸುತ್ತಾ ಭ್ರಷ್ಟಾಚಾರದಲ್ಲಿ ತೊಡಗಿದೆ. ಭಕ್ತರು ನೀಡಿದ ಚಿನ್ನ, ಬೆಳ್ಳಿ ಮತ್ತು ಇಟ್ಟಿಗೆಗಳನ್ನೂ ಬಿಡದೆ ಲೂಟಿ ಮಾಡಲಾಗಿದೆ. ಈ ವಂಚನೆಯಲ್ಲಿ ಬಡವರಾಗಲಿ, ದಲಿತರಾಗಲಿ ಅಥವಾ ರೈತರಾಗಲಿ ಭಾಗಿಯಾಗಿಲ್ಲ; ಬದಲಿಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸೇರಿದವರೇ ಇದಕ್ಕೆ ಕಾರಣ ಎಂದು ಅವರು ವಾಗ್ದಾಳಿ ನಡೆಸಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ 'ಮತ ಚೋರಿ' ಮಾಡುತ್ತಿದೆ ಎಂದು ಆಪಾದಿಸಿದ ಖರ್ಗೆ, ಅಧಿಕಾರವನ್ನು ಉಳಿಸಿಕೊಳ್ಳಲು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು. ಇಂತಹ ಅನ್ಯಾಯಗಳನ್ನು ತಡೆಯಲೆಂದೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಲಿಷ್ಠ ಸಂವಿಧಾನವನ್ನು ರಚಿಸಿದ್ದು, ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ರಕ್ಷಣೆಗೆ ಜಾಗರೂಕರಾಗಿರಬೇಕು ಎಂದು ಕರೆ ನೀಡಿದರು. ಜೊತೆಗೆ, ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ತನ್ನ ರಾಜಕೀಯ ಬಲವರ್ಧನೆಗಾಗಿ ಕ್ಷೇತ್ರ ಮರುವಿಂಗಡಣೆ ಮತ್ತು 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಗಳನ್ನು ಜಾರಿಗೆ ತರಲು ಸಂಚು ರೂಪಿಸುತ್ತಿದೆ ಎಂದು ಅವರು ಕಿಡಿಕಾರಿದರು. ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರು 30 ದಿನಗಳ ಜೈಲುವಾಸ ಅನುಭವಿಸಿದ ನಂತರ ಅನರ್ಹಗೊಳ್ಳುವ ಪ್ರಸ್ತಾವಿತ ಕಾನೂನಿನ ನಿಬಂಧನೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಕಾಂಗ್ರೆಸ್ ತನ್ನ ನಿಲುವು ಪ್ರಕಟಿಸಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಆಧುನಿಕ ಭಾರತದ ಪ್ರಜಾಪ್ರಭುತ್ವದ ನಿಜವಾದ ಶಿಲ್ಪಿ ಎಂದು ಬಣ್ಣಿಸಿದ ಖರ್ಗೆ, ಇಂದು ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗದವರು ಶಿಕ್ಷಣ, ರಾಜಕೀಯ ಪ್ರಾತಿನಿಧ್ಯ ಹಾಗೂ ಮತದಾನದ ಹಕ್ಕನ್ನು ಪಡೆದುಕೊಂಡಿರುವುದಕ್ಕೆ ಸಂವಿಧಾನವೇ ಕಾರಣ ಎಂದರು. ಅಂಬೇಡ್ಕರ್ ಅವರು 140 ಕೋಟಿ ಭಾರತೀಯರ ಹಣೆಬರಹವನ್ನು ಬರೆದಿದ್ದಾರೆ. ದೇಶದಲ್ಲಿ ಯಾರೂ ಹಸಿವಿನಿಂದ ಬಳಲಬಾರದು, ಜನರಿಗೆ ಉದ್ಯೋಗ, ಆಹಾರ ಮತ್ತು ಗೌರವ ಸಿಗಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಆದರೆ ಬಿಜೆಪಿ ಕೇವಲ ಮತಗಳ ಬಗ್ಗೆ ಮಾತ್ರ ಚಿಂತಿಸುತ್ತದೆ ಎಂದು ಟೀಕಿಸಿದ ಅವರು, ನಿಮ್ಮ ಹಕ್ಕುಗಳನ್ನು ರಕ್ಷಿಸುವ ಸಂವಿಧಾನವನ್ನು ಒಗ್ಗೂಡಿ ರಕ್ಷಿಸಿ ಎಂದು ಜನತೆಗೆ ಕರೆ ನೀಡಿದರು.

Category
ಕರಾವಳಿ ತರಂಗಿಣಿ