ಚೆನ್ನೈ : ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ 'ಡಿಎಂಕೆ ಫೈಲ್ಸ್' ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ ದೊಡ್ಡ ಕಾನೂನು ಜಯ ಸಿಕ್ಕಿದೆ. ಅಣ್ಣಾಮಲೈ ವಿರುದ್ಧ ಡಿಎಂಕೆ ಹಿರಿಯ ನಾಯಕ ಹಾಗೂ ಸಂಸದ ಟಿ.ಆರ್. ಬಾಲು ಹೂಡಿದ್ದ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಅಧಿಕೃತವಾಗಿ ವಾಪಸ್ ಪಡೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಎಕ್ಸ್ (ಟ್ವಿಟರ್) ತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಕೆ. ಅಣ್ಣಾಮಲೈ, ನಾನು ಡಿಎಂಕೆ ಫೈಲ್ಸ್ ಮೂಲಕ ಡಿಎಂಕೆ ನಾಯಕರ ವಿರುದ್ಧ ಮಾಡಿದ್ದ ಪ್ರತಿಯೊಂದು ಭ್ರಷ್ಟಾಚಾರದ ಆರೋಪಗಳಿಗೂ ಇಂದಿಗೂ ಬದ್ಧನಾಗಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಸಿಎಂ ಸ್ಟಾಲಿನ್ ಕುಟುಂಬ ಹಾಗೂ ಪಕ್ಷದ ಪ್ರಮುಖ ನಾಯಕರ ಬೇನಾಮಿ ಆಸ್ತಿ ಮತ್ತು ಭ್ರಷ್ಟಾಚಾರದ ಜಾತಕವನ್ನು ಅಣ್ಣಾಮಲೈ ಅವರು 'ಡಿಎಂಕೆ ಫೈಲ್ಸ್' ಹೆಸರಿನಲ್ಲಿ ಬಿಡುಗಡೆ ಮಾಡಿದ್ದರು. ಇದರಲ್ಲಿ ಟಿ.ಆರ್. ಬಾಲು ಮತ್ತು ಅವರ ಕುಟುಂಬದ ಒಡೆತನದಲ್ಲಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಕಂಪನಿಗಳು ಹಾಗೂ ಆಸ್ತಿಯ ವಿವರಗಳೂ ಇದ್ದವು. ಇದನ್ನು ವಿರೋಧಿಸಿ ಟಿ.ಆರ್. ಬಾಲು ಅವರು ಕೋರ್ಟ್‌ನಲ್ಲಿ 100 ಕೋಟಿ ರೂಪಾಯಿ ಪರಿಹಾರ ಕೋರಿ ಅಣ್ಣಾಮಲೈ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಒಂದು ಹಂತಕ್ಕೆ ತಲುಪಿದ ನಂತರ, ಅಣ್ಣಾಮಲೈ ಅವರೇ ಸ್ವತಃ ವಕೀಲನಾಗಿ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು ಮತ್ತು ಟಿ.ಆರ್. ಬಾಲು ಅವರನ್ನು ಖುದ್ದಾಗಿ ಕ್ರಾಸ್ ಎಕ್ಸಾಮಿನೇಷನ್ (ಪಾಟಿ ಸವಾಲು) ಮಾಡಿದ್ದರು. ಈ ಕಲಾಪದ ಸಂಪೂರ್ಣ ವಿವರಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿವೆ ಎಂದು ಅಣ್ಣಾಮಲೈ ನೆನಪಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಟಿ.ಆರ್. ಬಾಲು ಅವರು ತಮ್ಮ ವಿರುದ್ಧ ಯಾವುದೇ ಆಧಾರವಿಲ್ಲದೆ ಕೋರ್ಟ್‌ನಲ್ಲಿ ನಿಂದನಾತ್ಮಕ ಹೇಳಿಕೆ ನೀಡಿದ್ದರು, ಹೀಗಾಗಿ ತಾವು ಬಾಲು ವಿರುದ್ಧ ಪ್ರತ್ಯೇಕವಾಗಿ ಮತ್ತೊಂದು ಪ್ರಕರಣ ದಾಖಲಿಸಿದ್ದಾಗಿ ಅಣ್ಣಾಮಲೈ ತಿಳಿಸಿದ್ದಾರೆ. ಈಗ ಟಿ.ಆರ್. ಬಾಲು ಅವರು ತಮ್ಮ ಸ್ವಂತ ಇಚ್ಛೆಯಿಂದ ಈ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ವಾಪಸ್ ಪಡೆದಿದ್ದಾರೆ. ಕೇಸ್ ಮುಂದುವರಿಸಬೇಕೋ ಬೇಡವೋ ಎಂಬುದು ಅವರ ನಿರ್ಧಾರವಾಗಿತ್ತು, ನನ್ನದಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ. ಕಾನೂನು ಹೋರಾಟದಲ್ಲಿ ತಮಗೆ ಬೆಂಬಲವಾಗಿ ನಿಂತ ಬಿಜೆಪಿ ಕಾನೂನು ಪ್ರಕೋಷ್ಠದ ವಕೀಲರಾದ ಪಾಲ್ ಕನಕರಾಜ್ ಹಾಗೂ ಕುಮರಗುರು ಅವರಿಗೆ ಅಣ್ಣಾಮಲೈ ಧನ್ಯವಾದ ಅರ್ಪಿಸಿದ್ದು, ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮಹತ್ವದ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಅವರ ಮುಂದಿನ ದೊಡ್ಡ ಹೆಜ್ಜೆಗೆ ಮತ್ತಷ್ಟು ಬಲ ನೀಡಿದೆ. ಇತ್ತೀಚೆಗಷ್ಟೇ ಅಣ್ಣಾಮಲೈ ಅವರು ತಾವು ಆರಂಭಿಸಿರುವ 'ವಿ ದಿ ಲೀಡರ್ಸ್' ಸಾಮಾಜಿಕ ಚಳವಳಿಯನ್ನು ಇದೇ ಜುಲೈ ತಿಂಗಳಲ್ಲಿ ಅಧಿಕೃತ ರಾಜಕೀಯ ಪಕ್ಷವಾಗಿ ಪರಿವರ್ತಿಸುವುದಾಗಿ ಘೋಷಿಸಿದ್ದರು. ರಾಜ್ಯದಲ್ಲಿ ಭ್ರಷ್ಟಾಚಾರ, ಕಳಪೆ ಆಡಳಿತ ಮತ್ತು ಮಿತಿಮೀರಿರುವ ಮಾದಕ ದ್ರವ್ಯಗಳ ಹಾವಳಿಯ ವಿರುದ್ಧ ಜನಪರ ಪರ್ಯಾಯ ಶಕ್ತಿಯಾಗಿ ಈ ಹೊಸ ಪಕ್ಷವನ್ನು ಮುನ್ನೆಲೆಗೆ ತರಲು ಅವರು ಯೋಜಿಸಿದ್ದಾರೆ. ತಮಿಳುನಾಡಿನಾದ್ಯಂತ ಸುಮಾರು 50 ಲಕ್ಷ ಸದಸ್ಯರನ್ನು ನೋಂದಾಯಿಸಿಕೊಳ್ಳುವ ಗುರಿ ಹೊಂದಿರುವ ಅಣ್ಣಾಮಲೈ ಅವರಿಗೆ, ಈ ಕೋರ್ಟ್ ಕೇಸ್ ಮುಕ್ತಾಯಗೊಂಡಿರುವುದು ಆನೆಬಲ ತಂದಿದೆ.