ಮಂಗಳೂರು : ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳು (BLA-2) ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜಾ ಅವರು ಕರೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ವಾರ್ಡ್ ಮಟ್ಟದ ಕೋ-ಆರ್ಡಿನೇಟರ್‌ಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿ.ಎಲ್.ಎ-2ಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎಸ್.ಐ.ಆರ್. ಪ್ರಕ್ರಿಯೆಯ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಮತದಾರರಿಂದ ಅಗತ್ಯ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಬಿ.ಎಲ್.ಒ.ಗಳಿಗೆ ಸಲ್ಲಿಸಿ, ಅದರ ಸ್ವೀಕೃತಿಯನ್ನು ಪಡೆಯುವಂತೆ ಅವರು ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಅಭ್ಯರ್ಥಿ ಶ್ರೀ ಪದ್ಮರಾಜ್ ಆರ್. ಪೂಜಾರಿ ಅವರು ಮಾತನಾಡಿ, ಮತದಾರರಲ್ಲಿ ಜಾಗೃತಿ ಮೂಡಿಸುವುದು ಮತ್ತು ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳುವುದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಕಾರ್ಯವಾಗಿದೆ ಎಂದರು. ಐವನ್ ಡಿ'ಸೋಜಾ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಎಸ್.ಐ.ಆರ್. ಕಾರ್ಯಕ್ರಮದ ಕುರಿತು ನೀಡುತ್ತಿರುವ ತರಬೇತಿಯನ್ನು ಅವರು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ನಾಗೇಂದ್ರ ಕುಮಾರ್, ಅಶ್ರಫ್ ಬಜಾಲ್, ಅಮೃತ್ ಕದ್ರಿ, ಕವಿತಾ ವಾಸು, ಗಿರೀಶ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.