image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್‌ಐಆರ್ ವಿರೋಧದ ಹಿಂದೆ ಅಕ್ರಮ ಮತದಾರರ ರಕ್ಷಣೆ ಹುನ್ನಾರ: ಸಿ.ಟಿ. ರವಿ ಆಪಾದನೆ

ಎಸ್‌ಐಆರ್ ವಿರೋಧದ ಹಿಂದೆ ಅಕ್ರಮ ಮತದಾರರ ರಕ್ಷಣೆ ಹುನ್ನಾರ: ಸಿ.ಟಿ. ರವಿ ಆಪಾದನೆ

ಬೆಂಗಳೂರು : ಎಸ್‌ಐಆರ್ (SIR) ಪ್ರಕ್ರಿಯೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷವು, ಮತದಾರರ ಪಟ್ಟಿಯಲ್ಲಿ ನಕಲಿ ಮತ್ತು ಅನಧಿಕೃತ ಮತದಾರರನ್ನು ಉಳಿಸಿಕೊಳ್ಳುವ ಹುನ್ನಾರ ನಡೆಸುತ್ತಿದೆಯೇ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯ ಮುಖ್ಯ ಉದ್ದೇಶವೇ ಅನಧಿಕೃತ ಮತದಾರರನ್ನು ತಡೆಯುವುದು ಮತ್ತು ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ನೋಡಿಕೊಳ್ಳುವುದಾಗಿದೆ ಎಂದರು. ಇದು 1952ರಿಂದಲೂ ಜಾರಿಯಲ್ಲಿರುವ ಚುನಾವಣಾ ಆಯೋಗದ ನಿಯಮಿತ ಪ್ರಕ್ರಿಯೆಯಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ಅವರು ಆಕ್ಷೇಪಿಸಿದರು.

ಒಬ್ಬ ವ್ಯಕ್ತಿಯ ಹೆಸರು ಹಲವು ಕಡೆ ಇರಬೇಕೇ ಅಥವಾ ಮೃತರ ಹೆಸರು ಪಟ್ಟಿಯಲ್ಲಿ ಮುಂದುವರಿಯಬೇಕೇ ಎಂದು ಪ್ರಶ್ನಿಸಿದ ಸಿ.ಟಿ. ರವಿ, ತಾವು ಸ್ಪರ್ಧಿಸಿದ್ದ ಚುನಾವಣೆಯೊಂದರ ಸೋಲಿನ ಬಳಿಕ ಪರಿಶೀಲಿಸಿದಾಗ ಮೃತಪಟ್ಟ ಸಾವಿರಾರು ಜನರ ಹೆಸರಿನಲ್ಲಿ ಮತ ಚಲಾವಣೆಯಾಗಿರುವುದು ಪತ್ತೆಯಾಗಿತ್ತು ಎಂದು ನೆನಪಿಸಿಕೊಂಡರು. ಈ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ಸಹ ಸ್ಪಷ್ಟ ನಿರ್ದೇಶನ ನೀಡಿದ್ದು, ಇದನ್ನು ವಿರೋಧಿಸುವುದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಿದಂತೆಯೇ ಸರಿ ಎಂದು ಅವರು ಪ್ರತಿಪಾದಿಸಿದರು. ಈ ಕಾರ್ಯದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿಲ್ಲ; ಸ್ಥಳೀಯ ಶಾಲಾ ಶಿಕ್ಷಕರು, ಅಂಗನವಾಡಿ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೇ ತೊಡಗಿದ್ದಾರೆ. ಆದರೆ ಇತ್ತೀಚೆಗೆ ಅಧಿಕಾರಿಗಳಿಗೆ ಅರ್ಹ ಮತದಾರರ ಹೆಸರು ರಕ್ಷಿಸುವ ಬದಲು, ಕೇವಲ ಅಲ್ಪಸಂಖ್ಯಾತರ ಮತಗಳು ಮಾತ್ರ ಕೈಬಿಡಬಾರದು ಎಂಬ ರೀತಿಯ ನಿರ್ದೇಶನ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಮೂಲದ ವಿದೇಶಿ ಪ್ರಜೆಗಳಿಗೆ ಭಾರತೀಯ ಸಂವಿಧಾನ ಮತದಾನದ ಹಕ್ಕು ನೀಡಿಲ್ಲ. ಇಂತಹ ಅಕ್ರಮಗಳನ್ನು ಮತ್ತು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತ ಚಲಾಯಿಸುವ ಅವಕಾಶಗಳನ್ನು ತಡೆಯುವುದೇ ಎಸ್‌ಐಆರ್‌ನ ಉದ್ದೇಶವಾಗಿದೆ. ಸಿಎಎ ಜಾರಿಯಾದಾಗಲೂ ಮುಸ್ಲಿಮರ ಪೌರತ್ವ ಕಸಿದುಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ದೇಶದಲ್ಲಿ ಭಯದ ವಾತಾವರಣ ನಿರ್ಮಿಸಿತ್ತು, ಈಗ ಎಸ್‌ಐಆರ್ ವಿಚಾರದಲ್ಲೂ ಅಲ್ಪಸಂಖ್ಯಾತರಲ್ಲಿ ಅನಗತ್ಯ ಭಯ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಮತ್ತು ಮತಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ಮತದಾರರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಅವರು ಟೀಕಿಸಿದರು.

Category
ಕರಾವಳಿ ತರಂಗಿಣಿ