image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುರಂಗ ಮಾರ್ಗ ವೈಜ್ಞಾನಿಕ ನಗರಾಭಿವೃದ್ಧಿಯ ಸಮಾಧಿ ಕಲ್ಲು: ತೇಜಸ್ವಿ ಸೂರ್ಯ ಟೀಕೆ

ಸುರಂಗ ಮಾರ್ಗ ವೈಜ್ಞಾನಿಕ ನಗರಾಭಿವೃದ್ಧಿಯ ಸಮಾಧಿ ಕಲ್ಲು: ತೇಜಸ್ವಿ ಸೂರ್ಯ ಟೀಕೆ

ಬೆಂಗಳೂರು : ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ೧,೧೩೯ ಕೋಟಿ ರೂಪಾಯಿ ವೆಚ್ಚದ ಸುರಂಗ ಮಾರ್ಗ ಯೋಜನೆಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ವಿರೋಧಿಸಿದ್ದಾರೆ. ಮುಖ್ಯಮಂತ್ರಿಗಳು ಇಂದು ಯೋಜನೆಗೆ ಶಂಕುಸ್ಥಾಪನೆ ಮಾಡಿಲ್ಲ, ಬದಲಿಗೆ ನಗರದ ವೈಜ್ಞಾನಿಕ ನಗರಾಭಿವೃದ್ಧಿಗೆ ಸಮಾಧಿ ಕಲ್ಲು ನೆಟ್ಟಿದ್ದಾರೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ಲೇವಡಿ ಮಾಡಿದ್ದಾರೆ. ಈ ೨ ಕಿಲೋಮೀಟರ್ ಉದ್ದದ ಸುರಂಗ ಮಾರ್ಗವು ಆರಂಭವಾದ ಮೊದಲ ದಿನದಿಂದಲೇ ಸಂಪೂರ್ಣವಾಗಿ ವಾಹನ ದಟ್ಟಣೆಯಿಂದ ಕೂಡಿರಲಿದೆ ಎಂದು ಸರ್ಕಾರದ ಸ್ವಂತ ಯೋಜನಾ ವರದಿಯೇ (DPR) ಒಪ್ಪಿಕೊಂಡಿದೆ. ಹೀಗಿರುವಾಗ ಈ ಯೋಜನೆ ಸಾಮಾನ್ಯ ಪ್ರಯಾಣಿಕರಿಗಂತೂ ಖಂಡಿತ ಉಪಯೋಗವಿಲ್ಲ. ಇದು ಕೇವಲ ಸದಾಶಿವನಗರದ ವಿಐಪಿಗಳು, ಮುಖ್ಯಮಂತ್ರಿಗಳು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವ ನಗರದ ಗಣ್ಯರ ಅನುಕೂಲಕ್ಕಾಗಿ ರೂಪಿಸಿದಂತಿದೆ ಎಂದು ಅವರು ಆರೋಪಿಸಿದ್ದಾರೆ.

ಸಾಮಾನ್ಯ ತೆರಿಗೆದಾರರ ಹಣದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯ ಪ್ರಮುಖ ಫಲಾನುಭವಿಗಳು ಗುತ್ತಿಗೆದಾರರಾಗಿದ್ದು, ಅವರು ಕಾಂಗ್ರೆಸ್ ನಿಧಿಗೆ ಭಾರಿ ಪ್ರಮಾಣದ ಕಿಕ್‌ಬ್ಯಾಕ್ ನೀಡಬಹುದು ಎಂದು ಸೂರ್ಯ ಶಂಕೆ ವ್ಯಕ್ತಪಡಿಸಿದ್ದಾರೆ. ಫ್ಲೈಓವರ್‌ಗಳಂತೆ ಸುರಂಗ ಮಾರ್ಗಗಳೂ ವಿಫಲವಾಗಲಿದ್ದು, ಸರ್ಕಾರ ಇದರ ಬದಲು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು ಮತ್ತು ಪ್ರಸ್ತಾವಿತ ರೆಡ್ ಲೈನ್ ಮೆಟ್ರೋ ಕಾರಿಡಾರ್ ಅನ್ನು ವೇಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಣ್ಣ ಫ್ಲೈಓವರ್‌ಗಳಿಂದ ಸಂಚಾರ ದಟ್ಟಣೆ ನಿವಾರಿಸಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರೇ ಹಿಂದೆ ಹೇಳಿದ್ದನ್ನು ನೆನಪಿಸಿದ ಅವರು, ಈ ಸಣ್ಣ ಸುರಂಗ ಮಾರ್ಗವನ್ನು ಇದಕ್ಕಿಂತ ದೊಡ್ಡದಾದ ಸುರಂಗ ಯೋಜನೆಗೆ ಹೆಬ್ಬಾಗಿಲು ಮಾಡಲು ಬಿಡುವುದಿಲ್ಲ ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ ಇಂತಹ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಭವಿಷ್ಯವು ಹೆಚ್ಚಿನ ಮೆಟ್ರೋ, ಬಸ್‌ಗಳು ಹಾಗೂ ಉತ್ತಮ ಉಪನಗರ ರೈಲು ಯೋಜನೆಯಲ್ಲಿದೆಯೇ ಹೊರತು ಇಂತಹ ದುಬಾರಿ ಸ್ಮಾರಕಗಳಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ