ಚಿಕ್ಕಮಗಳೂರು : ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಈಗ ಬಿಜೆಪಿ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಅದಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಟೀಕಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಂದಿಗೂ ರಾಮ ಮಂದಿರ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಬದಲಾಗಿ ರಾಮನ ಅಸ್ತಿತ್ವವೇ ಕಾಲ್ಪನಿಕ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ರಾಮಸೇತುವೆಯ ಅಸ್ತಿತ್ವವನ್ನೇ ನಿರಾಕರಿಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು. ದೇಶ ವಿಭಜನೆಯಾದ ತಕ್ಷಣವೇ ಸೋಮನಾಥ ದೇವಾಲಯದ ಮಾದರಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬಹುದಿತ್ತು. ಆದರೆ ಜವಾಹರಲಾಲ್ ನೆಹರೂ ಅವರು ಸೋಮನಾಥ ದೇವಾಲಯದ ಪುನರ್‌ನಿರ್ಮಾಣವನ್ನೇ ವಿರೋಧಿಸಿದ್ದರು. ಅದೇ ಧೋರಣೆಯನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿದೆ ಎಂದು ಹೇಳಿದರು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿಯನ್ನಾದರೂ ದೇಣಿಗೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಸಿ.ಟಿ. ರವಿ, ದೇಣಿಗೆ ನೀಡಿದ ಸಾರ್ವಜನಿಕ ಪಟ್ಟಿಗಳಲ್ಲಿ ಅವರ ಹೆಸರಿಲ್ಲ. ಹಣ ನೀಡಿದವರಿಗೆ ಮಾತ್ರ ಪ್ರಶ್ನಿಸುವ ಹಕ್ಕಿರುತ್ತದೆ ಎಂದರು. ರಾಮ ಮಂದಿರ ಟ್ರಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಯಾವುದೇ ಪದಾಧಿಕಾರಿಗಳೂ ಸದಸ್ಯರಾಗಿ ಇಲ್ಲ. ಹೀಗಿರುವಾಗ ಟ್ರಸ್ಟ್‌ಗೆ ಸಂಬಂಧಿಸಿದ ವಿಚಾರಗಳನ್ನು ಬಿಜೆಪಿಯ ಮೇಲೆ ಹೊರಿಸುವುದು ತಪ್ಪು ಎಂದ ಅವರು, ಕಾಣಿಕೆ ಹಣ ದುರುಪಯೋಗದ ಆರೋಪದ ಕುರಿತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ. ಭ್ರಷ್ಟಾಚಾರವನ್ನು ಸಮರ್ಥಿಸುವುದು ಬಿಜೆಪಿಯ ಸಂಸ್ಕೃತಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ದತ್ತಪೀಠ ಮತ್ತು ಬಾಬಾಬುಡನ್ ದರ್ಗಾ ವಿಚಾರ ಪ್ರಸ್ತಾಪಿಸಿದ ಅವರು, ಹಿಂದೂ ಸಮಾಜವನ್ನು ವಿಭಜಿಸುವುದು ಮತ್ತು ಅಸತ್ಯದ ರಾಜಕಾರಣ ಮಾಡುವುದೇ ಕಾಂಗ್ರೆಸ್‌ನ ಮುಖ್ಯ ಉದ್ದೇಶ ಎಂದು ಆರೋಪಿಸಿದರು.