image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಖ್ಯಮಂತ್ರಿಯಾಗಿ ನನ್ನದೇ ನಡೆಯಬೇಕು ಎನ್ನುವುದು ಸರಿಯಲ್ಲ : ವಿ ಸೋಮಣ್ಣ

ಮುಖ್ಯಮಂತ್ರಿಯಾಗಿ ನನ್ನದೇ ನಡೆಯಬೇಕು ಎನ್ನುವುದು ಸರಿಯಲ್ಲ : ವಿ ಸೋಮಣ್ಣ

ದಾವಣಗೆರೆ : ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಸಿಎಂ ಎಂದು ಉಲ್ಲೇಖಿಸಿ) ಅವರ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. "ಮುಖ್ಯಮಂತ್ರಿಯಾಗಿ ನನ್ನದೇ ನಡೆಯಬೇಕು ಎನ್ನುವುದು ಸರಿಯಲ್ಲ, ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು" ಎಂದು ಕಿವಿಮಾತು ಹೇಳಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿದ ಅವರು, ಈ ಹಿಂದೆ ತಾವು ಸೂರ್ಯನಗರದ ಮೂರು ಹಂತಗಳನ್ನು ರೈತರಿಗೆ ಅನ್ಯಾಯವಾಗದಂತೆ ಯಶಸ್ವಿಯಾಗಿ ಮಾಡಿದ್ದನ್ನು ನೆನಪಿಸಿದರು. ರೈತರು ವಿರೋಧಿಸಿದರೆ ಹಠ ಹಿಡಿಯದೆ ಹತ್ತು ಕಿಲೋಮೀಟರ್ ಮುಂದೆ ಹೋಗಿ ಯೋಜನೆ ಮಾಡಬಹುದು. ಕುಮಾರಸ್ವಾಮಿ ಮತ್ತು ಶಿವಕುಮಾರ್ ಅವರ ಕೆಸರೆರಚಾಟದಲ್ಲಿ ಜನರ ನೆಮ್ಮದಿ ಕೆಡಿಸಬಾರದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿ ಟೌನ್‌ಶಿಪ್ ಯೋಜನೆ ಕೈಬಿಡುವುದು ಎಲ್ಲರಿಗೂ ಕ್ಷೇಮ ಎಂದು ಸಲಹೆ ನೀಡಿದರು. ಆರ್ಎಸ್ಎಸ್ ನೋಂದಣಿ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ನೀಡಿದ ಸೋಮಣ್ಣ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕಡೆಗೆ ಗಮನ ಹರಿಸಲಿ ಮತ್ತು ಸಮಯ ಸಿಕ್ಕಾಗ ಒಮ್ಮೆ ಸಂಘದ ಶಾಖೆಗೆ ಬಂದು ಅದರ ಕಾರ್ಯವೈಖರಿ ತಿಳಿದುಕೊಳ್ಳಲಿ ಎಂದರು. ಇದೇ ವೇಳೆ ಅಯೋಧ್ಯೆ ರಾಮಮಂದಿರದ ಹಣ ಅವ್ಯವಹಾರದ ಆರೋಪಕ್ಕೆ ಪ್ರತಿಕ್ರಿಯಿಸಿ, ಭಗವಂತನ ಹೆಸರಿನಲ್ಲಿ ಪಾಪ ಮಾಡಿದರೆ ಅವರಿಗಿಂತ ಪಾಪಿಗಳು ಬೇರೆ ಇಲ್ಲ, ಅನ್ಯಾಯ ಮಾಡಿದವರಿಗೆ ಶಿಕ್ಷೆ ಖಂಡಿತ ಆಗುತ್ತದೆ ಎಂದರು. ಪಕ್ಷದೊಳಗಿನ ಅಡ್ಡ ಮತದಾನದ ಬಗ್ಗೆ ಹಿರಿಯ ನಾಯಕರು ತೀವ್ರವಾಗಿ ಪರಿಗಣಿಸಿದ್ದು, ಸಿ.ಟಿ. ರವಿ ಸಮಿತಿ ಮಧ್ಯಂತರ ವರದಿ ನೀಡಿದೆ ಮತ್ತು ಕ್ರಮದ ಬಗ್ಗೆ ಪಕ್ಷ ಈಗಾಗಲೇ ತೀರ್ಮಾನಕ್ಕೆ ಬಂದಿದೆ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ಆಣೆ-ಪ್ರಮಾಣದ ವಿವಾದ ಹಳೆಯ ವಿಚಾರವಾಗಿದ್ದು, ವರಿಷ್ಠರ ಸೂಚನೆ ಮೇರೆಗೆ ಆ ಅಧ್ಯಾಯ ಮುಗಿದಿದೆ ಎಂದು ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯುವಕರಾಗಿದ್ದು, ಹಿರಿಯರ ಮಾರ್ಗದರ್ಶನ ಪಡೆದು ಮುಂದೆ ಎಲ್ಲವನ್ನೂ ಸರಿಪಡಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಿಡದಿ ಟೌನ್‌ಶಿಪ್ ವಿಚಾರವಾಗಿ ಮಾತನಾಡಿದ ನಿರಾಣಿ, ಶೇಕಡಾ 80 ರಷ್ಟು ರೈತರು ಒಪ್ಪಿದರೆ ಮಾತ್ರ ಭೂಮಿ ಪಡೆಯಬೇಕು, ಯಾವುದೇ ಕಾರಣಕ್ಕೂ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಬಾರದು ಎಂದರು. ಇನ್ನು ಪಂಚಮಸಾಲಿ ಪೀಠದ ಗೊಂದಲಗಳ ಕುರಿತು ಪ್ರತಿಕ್ರಿಯಿಸಿ, 80 ಲಕ್ಷ ಜನಸಂಖ್ಯೆ ಇರುವ ದೊಡ್ಡ ಸಮುದಾಯದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ಮುಂಬರುವ ದಿನಗಳಲ್ಲಿ ಸಮುದಾಯದ ಎಲ್ಲಾ ನಾಯಕರು ಒಟ್ಟಿಗೆ ಕುಳಿತು ಗೊಂದಲಗಳನ್ನು ಬಗೆಹರಿಸಿಕೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ