image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನಾಯಕರಿಗೆ ಭದ್ರತೆಯಿಲ್ಲದೆ ಓಡಾಡಲು ಸಾಧ್ಯವಿಲ್ಲ: ಪವನ್ ಖೇರಾ

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನಾಯಕರಿಗೆ ಭದ್ರತೆಯಿಲ್ಲದೆ ಓಡಾಡಲು ಸಾಧ್ಯವಿಲ್ಲ: ಪವನ್ ಖೇರಾ

ನವದೆಹಲಿ : ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ನಾಯಕರು ಭದ್ರತೆ ಇಲ್ಲದೆ ಮುಕ್ತವಾಗಿ ಓಡಾಡಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯ ಪವನ್ ಖೇರಾ ಹೇಳಿಕೆ ನೀಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಬಿಜೆಪಿಯ ಕಳೆದ 12-15 ತಿಂಗಳ ಆಡಳಿತದ ಪ್ರತಿಯೊಂದು ವಿಷಯಗಳನ್ನು ಲೆಕ್ಕ ಹಾಕಿ ಇಟ್ಟುಕೊಂಡಿರುತ್ತೇವೆ. ಆಗ ಬಿಜೆಪಿ ನಾಯಕರು ಭದ್ರತೆ ಇಲ್ಲದೆ ಮನೆಯಿಂದ ಹೊರಗೆ ಹೆಜ್ಜೆ ಇಡಲು ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ವಿಶೇಷ ಭದ್ರತೆಯ ಅಗತ್ಯವಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ದೇಶದಲ್ಲಿ ಸದ್ಯ ಮಾಧ್ಯಮಗಳ ಧ್ವನಿಯನ್ನು ಅಡಗಿಸಲಾಗುತ್ತಿದೆ ಮತ್ತು ಕೇಂದ್ರದ ಪ್ರಮುಖ ಸ್ವಾಯತ್ತ ಸಂಸ್ಥೆಗಳನ್ನು ಹೈಜಾಕ್ ಮಾಡಲಾಗಿದೆ ಎಂದು ಖೇರಾ ಗಂಭೀರ ಆರೋಪ ಮಾಡಿದ್ದಾರೆ. ಇ.ಡಿ ಮತ್ತು ಸಿಬಿಐ ಸಂಸ್ಥೆಗಳನ್ನು ಸಂಪೂರ್ಣವಾಗಿ ಕಾಲಡಿಗೆ ಹಾಕಿಕೊಳ್ಳಲಾಗಿದ್ದು, ದೇಶದಲ್ಲಿ ಪ್ರಜಾಪ್ರಭುತ್ವದ ಅಣಕ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗವೂ ಬಿಜೆಪಿಯ ಕಿಸೆಯಲ್ಲಿದೆ ಎಂದು ದೂರಿದ್ದಾರೆ. ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಎಲ್ಲೆಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆಯೋ, ಅಲ್ಲೆಲ್ಲ ಮುಂದೆ ಏನಾಗುತ್ತದೆ ಎಂಬುದನ್ನು ಸಾರ್ವಜನಿಕರು ಕಾದುನೋಡಬೇಕಿದೆ. ಆಡಳಿತಾರೂಢ ಸರ್ಕಾರಕ್ಕೆ ದೇಶದ ಮಕ್ಕಳ ಆರೋಗ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕೇವಲ ಧರ್ಮ, ಸಂಸ್ಕೃತಿ ಮತ್ತು ದೇಶಪ್ರೇಮದ ಹೆಸರಿನಲ್ಲಿ ರಾಜಕೀಯ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಯೋಧ್ಯೆ ಮತ್ತು ಉಜ್ಜೈನ್‌ನಲ್ಲಿ ನಡೆದಿರುವ ಅಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದ್ದು, ಈ ಹಿಂದೆ ಸರ್ಕಾರವೇ ನಿರ್ವಹಿಸುತ್ತಿದ್ದ ಪಠ್ಯಪುಸ್ತಕಗಳ ಮುದ್ರಣ ಜವಾಬ್ದಾರಿಯನ್ನು ಈಗ ಬಿಜೆಪಿಗೆ ಹತ್ತಿರವಿರುವ ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ಎದುರಾಗಿರುವ ಎಲ್ಲಾ ಗೊಂದಲ ಮತ್ತು ಸಮಸ್ಯೆಗಳಿಗೆ ಇದೇ ಪ್ರಮುಖ ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಶಾಸನ ಸಭೆ ಎಂದರೆ ಏನು ಎಂದೇ ತಿಳಿಯದ ಅಪ್ರಬುದ್ಧ ಜನರಿಗೆ ಪಠ್ಯಪುಸ್ತಕ ಮುದ್ರಿಸುವ ಜವಾಬ್ದಾರಿ ನೀಡಿದ್ದರಿಂದಲೇ ಅದರಲ್ಲಿ 1,700 ರಿಂದ 2,000 ದೋಷಗಳು ಕಾಣಿಸಿಕೊಂಡಿವೆ. ಇಂತಹ ದೋಷಪೂರಿತ ಪಠ್ಯಪುಸ್ತಕಗಳ ಮೂಲಕ ಮುಂಬರುವ ಯುವ ಪೀಳಿಗೆಗೆ ಯಾವ ರೀತಿಯ ಶಿಕ್ಷಣ ನೀಡಲು ಸಾಧ್ಯ ಎಂಬುದನ್ನು ಸಾರ್ವಜನಿಕರೇ ಊಹಿಸಬೇಕು ಎಂದು ಪವನ್ ಖೇರಾ ಕಳವಳ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ