ಟಿ ಬಿ ಡ್ಯಾಮ್ : ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮುಂಜಾನೆಯೇ ಆಗಮಿಸಿ, ಆರಂಭದಿಂದಲೂ ಅತ್ಯಂತ ಉತ್ಸಾಹ ಮತ್ತು ಲವಲವಿಕೆಯಿಂದ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು. ಕರ್ನಾಟಕದಲ್ಲೂ ನಾಯ್ಡು ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಯಿತು. ಅವರ ಭಾಷಣ ಆರಂಭವಾಗುವ ಮುನ್ನವೇ ನೆರೆದಿದ್ದ ಅಭಿಮಾನಿಗಳು ನಾಯ್ಡು ಅವರ ಭಾವಚಿತ್ರಗಳನ್ನು ಹಿಡಿದು, ಶಿಳ್ಳೆ ಹಾಗೂ ಕೇಕೆ ಹಾಕಿ ಸಂಭ್ರಮದಿಂದ ಘೋಷಣೆಗಳನ್ನು ಕೂಗಿದರು.
ವೇದಿಕೆಯನ್ನೇರಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು 'ಎಲ್ಲ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು..' ಎಂದು ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸುವ ಮೂಲಕ ನೆರೆದಿದ್ದವರ ಮನಗೆದ್ದರು. ತಾಯಿ ತುಂಗಭದ್ರೆಗೆ ಶಿರಬಾಗಿ ನಮಸ್ಕರಿಸಿದ ಅವರು, ಗೇಟ್ ಅಳವಡಿಕೆಯಲ್ಲಿ ಶ್ರಮವಹಿಸಿದ ತುಂಗಭದ್ರಾ ಆಡಳಿತ ಮಂಡಳಿಗೆ ಕೈಮುಗಿದು ಧನ್ಯವಾದ ಅರ್ಪಿಸಿದರು. ಭಾಷಣದ ಮಧ್ಯೆ ಮಾತನಾಡುತ್ತಾ, ನನಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬಂದಿದ್ದರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ ಎಂದ ನಾಯ್ಡು, "ತುಂಗಾ ಪಾನಃ ಗಂಗಾ ಸ್ನಾನ" ಎಂಬ ನಾಣ್ಣುಡಿಯನ್ನು ನೆನಪಿಸಿ ತುಂಗಾ ನದಿಯ ನೀರು ಕುಡಿಯಲು ಅತ್ಯಂತ ಶುದ್ಧ ಎಂದೇ ಪ್ರಸಿದ್ಧಿ ಪಡೆದಿದೆ ಎಂದು ಬಣ್ಣಿಸಿದರು.
ಹಿಂದೆ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ಕೊಚ್ಚಿ ಹೋಗಿತ್ತು, ಆದರೆ ಈಗ ಕೊಚ್ಚಿಹೋದ ಗೇಟ್ ಅಷ್ಟೇ ಅಲ್ಲದೆ ಜಲಾಶಯದ ಒಟ್ಟು 33 ಗೇಟ್‌ಗಳನ್ನು ಹೊಸದಾಗಿ ಅಳವಡಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಹೊಸ ಗೇಟ್ ಅಳವಡಿಕೆ ವಿಳಂಬವಾಗಿದ್ದರೆ ಭಾರೀ ಅಪಾಯ ಎದುರಾಗುತ್ತಿತ್ತು, ಆದರೆ ಕೇವಲ ಆರು ತಿಂಗಳ ಅತ್ಯಲ್ಪ ಅವಧಿಯಲ್ಲಿ ಈ ಕಾಮಗಾರಿಯನ್ನು ಯಶಸ್ವಿಯಾಗಿ ಮುಗಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದರಿಂದ ಎದುರಾಗಬಹುದಾಗಿದ್ದ ದೊಡ್ಡ ಅಪಾಯವೊಂದು ದೂರಾದಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ನಾಯ್ಡು, ಈ ಕ್ರೆಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯನ್ನು ಹಂಚಿಕೊಂಡಿರುವುದು ಒಂದು ಐತಿಹಾಸಿಕ ಚರಿತ್ರೆಯಾಗಿದೆ ಮತ್ತು ಈ ಚರಿತ್ರೆ ಇಂದು ಇಲ್ಲಿ ಸೃಷ್ಟಿಯಾಗಿದೆ ಎಂದರು. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಸರಿಯಾದ ಸಮಯ ಪ್ರಜ್ಞೆಯೇ ಕಾರಣ ಎಂದು ಶ್ಲಾಘಿಸಿದ ಅವರು, ಮೋದಿ ಅವರದ್ದು ಯಾವಾಗಲೂ 'ರೈಟ್ ಟೈಂ, ರೈಟ್ ಡಿಸಿಷನ್' (ಸರಿಯಾದ ಸಮಯ, ಸರಿಯಾದ ನಿರ್ಧಾರ) ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.