image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪರಿಷತ್ ಚುನಾವಣೆ ಅಡ್ಡಮತದಾನ: ಜೂನ್ 25ರೊಳಗೆ ವರದಿ ನೀಡಲು ಹೈಕಮಾಂಡ್ ಗಡುವು

ಪರಿಷತ್ ಚುನಾವಣೆ ಅಡ್ಡಮತದಾನ: ಜೂನ್ 25ರೊಳಗೆ ವರದಿ ನೀಡಲು ಹೈಕಮಾಂಡ್ ಗಡುವು

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ನಡೆದಿದೆ ಎನ್ನಲಾದ ಅಡ್ಡಮತದಾನದ (ಕ್ರಾಸ್ ವೋಟಿಂಗ್) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್, ಈ ಸಂಬಂಧ ಜೂನ್ 25ರ ಒಳಗೆ ಸಂಪೂರ್ಣ ವರದಿ ನೀಡುವಂತೆ ಸಿ.ಟಿ.ರವಿ ನೇತೃತ್ವದ ತನಿಖಾ ಸಮಿತಿಗೆ ತುರ್ತು ಸೂಚನೆ ನೀಡಿದೆ. ಈ ವಿಚಾರವಾಗಿ ಚರ್ಚಿಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ರಾಷ್ಟ್ರೀಯ ನಾಯಕರು, ಅಡ್ಡಮತದಾನ ಮಾಡಿದ ಶಾಸಕರ ಹೆಸರು ಹಾಗೂ ಅದಕ್ಕೆ ಕಾರಣಗಳೇನು ಎಂಬ ವಿವರವಾದ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಪರವಾಗಿ ಪ್ರಮುಖ ನಾಯಕ ನಿತಿನ್ ನಬಿನ್ ಅವರು ಈ ಸಂದೇಶವನ್ನು ರಾಜ್ಯ ಘಟಕಕ್ಕೆ ರವಾನಿಸಿದ್ದು, ವರದಿ ಬಂದ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ಮತ್ತೊಂದೆಡೆ, ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಶಾಸಕರ ಹೇಳಿಕೆಗಳನ್ನು ಪರಾಮರ್ಶಿಸಿ ಸಿ.ಟಿ.ರವಿ ಸಮಿತಿಯು ಈಗಾಗಲೇ ಪ್ರಾಥಮಿಕ ವರದಿಯೊಂದನ್ನು ಸಿದ್ಧಪಡಿಸುತ್ತಿದೆ. ದೆಹಲಿಯಿಂದ ಅಧಿಕೃತ ಸೂಚನೆ ಬಂದರೆ ಇಂದೇ ಪ್ರಾಥಮಿಕ ಮಾಹಿತಿಯನ್ನು ರವಾನಿಸುವ ಸಾಧ್ಯತೆಯೂ ಇದೆ, ಇಲ್ಲದಿದ್ದರೆ ಬಿ.ವೈ. ವಿಜಯೇಂದ್ರ ಅವರು ದೆಹಲಿಯಿಂದ ಮರಳಿದ ಬಳಿಕ ವರದಿ ಸಲ್ಲಿಕೆಯಾಗಲಿದೆ. ರಹಸ್ಯ ಮತದಾನವಾಗಿರುವುದರಿಂದ ಅಡ್ಡ ಮತದಾನ ಮಾಡಿದವರ ಹೆಸರುಗಳನ್ನು ನಿಖರವಾಗಿ ಪತ್ತೆಹಚ್ಚಿ ಉಲ್ಲೇಖಿಸುವುದು ಕಷ್ಟಸಾಧ್ಯದ ವಿಚಾರವಾಗಿದ್ದರೂ, ಸಮಿತಿಯು ಈಗಾಗಲೇ ಬಹುತೇಕ ಎಲ್ಲಾ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕಲೆಹಾಕಿದೆ. ಜೂನ್ 25ರೊಳಗೆ ವರದಿ ನೀಡುವಂತೆ ಜೂನ್ 19ರಂದೇ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರು ಸಮಿತಿಗೆ ಆದೇಶಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದೇ ವೇಳೆ, ಅಡ್ಡಮತದಾನದ ಸತ್ಯಾಸತ್ಯತೆ ತಿಳಿಯಲು ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಆಣೆ ಪ್ರಮಾಣ ಮಾಡಿಸಲು ಯೋಚಿಸಿದ್ದ ನಿರ್ಧಾರದಿಂದ ಬಿಜೆಪಿ ಈಗ ಅಧಿಕೃತವಾಗಿ ಹಿಂದೆ ಸರಿದಿದೆ. ಸ್ವಪಕ್ಷದ ಕೆಲ ಹಿರಿಯ ನಾಯಕರಿಂದಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರವನ್ನು ರಾಜಕೀಯಕ್ಕೆ ಎಳೆದು ತರುವುದು ಬೇಡ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಗೊಂದಲಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಿ ಬಗೆಹರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ