image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಿಂಧೆ ಬಣಕ್ಕೆ ಶಿವಸೇನಾ ಯುಬಿಟಿ ಸಂಸದ ನಾಗೇಶ್ ಪಾಟೀಲ್ ಸೇರ್ಪಡೆ

ಶಿಂಧೆ ಬಣಕ್ಕೆ ಶಿವಸೇನಾ ಯುಬಿಟಿ ಸಂಸದ ನಾಗೇಶ್ ಪಾಟೀಲ್ ಸೇರ್ಪಡೆ

ಮಹಾರಾಷ್ಟ್ರ : ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ 'ಆಪರೇಷನ್ ಟೈಗರ್' ವದಂತಿಗಳ ಬೆನ್ನಲ್ಲೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಪಕ್ಷದ ಬಂಡಾಯ ಸಂಸದ ನಾಗೇಶ್ ಪಾಟೀಲ್ ಅಷ್ಟೀಕರ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದನ್ನು ಭಾನುವಾರ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಅವರು, ಜೂನ್ 18ರ ನಂತರ ತಮ್ಮ ವಿರುದ್ಧ ಪಕ್ಷದಲ್ಲಿ ಕೇಳಿಬಂದ ಕೆಲವು ಆಕ್ಷೇಪಾರ್ಹ ಹಾಗೂ ಹಗುರವಾದ ಹೇಳಿಕೆಗಳೇ ತಾವು ಉದ್ಧವ್ ಬಣವನ್ನು ತೊರೆಯಲು ಮುಖ್ಯ ಕಾರಣ ಎಂದು ತಿಳಿಸಿದ್ದಾರೆ.

ಹಿಂಗೋಲಿ ಕ್ಷೇತ್ರದ ಸಂಸದರಾಗಿರುವ ಅಷ್ಟೀಕರ್, ತಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಅನುದಾನದ ಕೊರತೆ ಮತ್ತು ವಿರೋಧ ಪಕ್ಷದಲ್ಲಿ ಇರುವುದರಿಂದ ಉಂಟಾಗುವ ಮಿತಿಗಳೇ ಈ ಪ್ರಮುಖ ನಿರ್ಧಾರಕ್ಕೆ ಕಾರಣ ಎಂದು ಹೇಳಿದ್ದಾರೆ. ನಾವು ಅಧಿಕಾರದಲ್ಲಿ ಇಲ್ಲದ ಕಾರಣ ಕಾರ್ಯಕರ್ತರ ಕೆಲಸಗಳು ಆಗುತ್ತಿಲ್ಲ. ಜನರು ನಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟು ಗೆಲ್ಲಿಸಿದ್ದಾರೆ, ಆದರೆ ನನಗೆ ಯಾವುದೇ ಅಭಿವೃದ್ಧಿ ಅನುದಾನ ಸಿಗುತ್ತಿರಲಿಲ್ಲ. ಕೇವಲ 5 ಕೋಟಿ ರೂಪಾಯಿಗಳ ಎಂಪಿಎಲ್‌ಎಡಿ (MPLAD) ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಕಳೆದ ಎರಡು ವರ್ಷಗಳಿಂದ ಪ್ರಯತ್ನಿಸಿದರೂ ಹಿಂಗೋಲಿ ಕ್ಷೇತ್ರಕ್ಕೆ ಯಾವುದೇ ಅನುದಾನ ಸಿಗದ ಕಾರಣ ಜನರಿಗಾಗಿ ನಾನು ಈ ಹೆಜ್ಜೆ ಇಟ್ಟಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಾವು ಮತ್ತು ಕೆಲವು ಸಂಸದರು ಜೂನ್ 18ರವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಕಳೆದ ಗುರುವಾರದಿಂದ ಪಕ್ಷದೊಳಗೆ ಕೇಳಿಬಂದ ಟೀಕೆಗಳಿಂದಾಗಿ ಇನ್ನು ಮುಂದೆ ಅಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ ಎಂದು ಅನಿಸಿತು ಎಂದಿದ್ದಾರೆ. ತಮಗೆ ಉದ್ಧವ್ ಠಾಕ್ರೆ ಅವರ ಮೇಲಾಗಲಿ ಅಥವಾ ತಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಂಜಯ್ ರಾವತ್ ಮೇಲಾಗಲಿ ವೈಯಕ್ತಿಕವಾಗಿ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ.

ಸಿದ್ಧಾಂತದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದಿರುವ ನಾಗೇಶ್ ಪಾಟೀಲ್ ಅಷ್ಟೀಕರ್, ನಾನು ಬೇರೆಲ್ಲೂ ಹೋಗಿಲ್ಲ, ಕೇವಲ ಶಿವಸೇನೆಯಿಂದ ಮತ್ತೊಂದು ಶಿವಸೇನೆಗೆ ಹೋಗಿದ್ದೇನೆ ಅಷ್ಟೇ ಎಂದಿದ್ದಾರೆ. ಇದೇ ವೇಳೆ, ಬಂಡಾಯಗಾರರ ವಿರುದ್ಧ ಸಂಜಯ್ ರಾವತ್ ನೀಡಿದ್ದ 'ಆಪರೇಷನ್ ತುಡ್ವಾ' (ಕಾರ್ಯಕರ್ತರಿಂದ ಆಕ್ರೋಶ) ಎಚ್ಚರಿಕೆಗೆ ತಿರುಗೇಟು ನೀಡಿರುವ ಅವರು, ರಾವತ್ ಅವರು ಹಿರಿಯರಾಗಿದ್ದರೂ ಮಾತನಾಡುವಾಗ ಭಾಷೆಯ ಮಿತಿ ಅರಿತು ಮಾತನಾಡಬೇಕು, ಎಲ್ಲರಿಗೂ ತಿರುಗೇಟು ನೀಡುವ ಶಕ್ತಿ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಜೂನ್ 17 ರಂದು ದೆಹಲಿಯಲ್ಲಿ ನಡೆದಿದ್ದ ಶಿವಸೇನಾ (ಯುಬಿಟಿ) ಸಂಸದೀಯ ಮಂಡಳಿ ಸಭೆಗೆ ನಾಗೇಶ್ ಪಾಟೀಲ್ ಅಷ್ಟೀಕರ್ ಸೇರಿದಂತೆ ಆರು ಸಂಸದರು ಗೈರುಹಾಜರಾಗಿದ್ದರು ಎಂಬುದು ಗಮನಾರ್ಹ.

Category
ಕರಾವಳಿ ತರಂಗಿಣಿ