image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣ

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣ

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜಂಟಿ ನಾಯಕರ ಸಮ್ಮುಖದ ಭವ್ಯ ಕಾರ್ಯಕ್ರಮದಲ್ಲಿ, ನಿಕಟಪೂರ್ವ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಧ್ವಜವನ್ನು ಹಸ್ತಾಂತರಿಸುವ ಮೂಲಕ ಜವಾಬ್ದಾರಿಯನ್ನು ಹರಿಪ್ರಸಾದ್ ಅವರಿಗೆ ವಹಿಸಿಕೊಟ್ಟರು. ಧ್ವಜ ಹಸ್ತಾಂತರ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಇಬ್ಬರೂ ನಾಯಕರು ಅಧಿಕೃತ ರಿಜಿಸ್ಟರ್ ಪ್ರತಿಯಲ್ಲಿ ಸಹಿ ಮಾಡಿದರು. ಈ ಐತಿಹಾಸಿಕ ಕ್ಷಣಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿದ್ದ ಪಕ್ಷದ ಕಾರ್ಯಕರ್ತರು ಸಾಕ್ಷಿಯಾದರು. ಅಧಿಕಾರ ಹಸ್ತಾಂತರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ತಮ್ಮ ರಾಜಕೀಯ ಹೋರಾಟದ ಹಾದಿಯನ್ನು ನೆನಪಿಸಿಕೊಂಡರು. ನಾನು ಮತ್ತು ಬಿ.ಕೆ. ಹರಿಪ್ರಸಾದ್ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಅವರು ನನಗಿಂತ ಕಾಲೇಜಿನಲ್ಲಿ ಸೀನಿಯರ್ ಆಗಿದ್ದರು ಮತ್ತು ಅಂದೇ ಅತ್ಯುತ್ತಮ ವಿದ್ಯಾರ್ಥಿ ನಾಯಕನಾಗಿ ಬೆಳೆದಿದ್ದರು. ಇಂದು ಅಂತಹ ಒಬ್ಬ ಹಿರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತನಿಗೆ ಕೆಪಿಸಿಸಿ ಸಾರಥ್ಯವನ್ನು ಹಸ್ತಾಂತರಿಸಿರುವುದು ನನ್ನ ಮನಸ್ಸಿಗೆ ಅತ್ಯಂತ ಸಮಾಧಾನ ತಂದಿದೆ ಎಂದು ಭಾವುಕರಾಗಿ ನುಡಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಶಿಸ್ತನ್ನು ಕೊಂಡಾಡಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸಾಹೇಬರ ಬಗ್ಗೆ ನಾನು ಎಂದೂ ಒಂದು ಸಣ್ಣ ನಕಾರಾತ್ಮಕ ಹೇಳಿಕೆಯನ್ನೂ ನೀಡಲಿಲ್ಲ. ಅವರು ಹೈಕಮಾಂಡ್‌ಗೆ ಮಾತು ಕೊಟ್ಟಂತೆ ಅತ್ಯಂತ ಗೌರವಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಸಹಕರಿಸಿದ್ದಾರೆ. ನನಗೆ ವೈಯಕ್ತಿಕವಾಗಿ ಯಾವುದೇ ಜಾತಿ, ಧರ್ಮದಲ್ಲಿ ನಂಬಿಕೆ ಇಲ್ಲ, ನಮಗೆ ಕಾಂಗ್ರೆಸ್ ಪಕ್ಷವೇ ಜಾತಿ ಮತ್ತು ಕಾಂಗ್ರೆಸ್ ಪಕ್ಷವೇ ಧರ್ಮ ಎಂದು ಘೋಷಿಸಿದರು. ತಮ್ಮ ಅಧ್ಯಕ್ಷಾವಧಿಯ ಆರಂಭದ ದಿನಗಳನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಹರಿಪ್ರಸಾದ್ ಅವರಿಗೆ ಸಿಕ್ಕ ನಸೀಬು ನನಗೆ ಸಿಗಲಿಲ್ಲ. ಅಂದು ಇಷ್ಟು ದೊಡ್ಡ ಸಾರ್ವಜನಿಕ ಕಾರ್ಯಕ್ರಮ ಮಾಡಿ ಪದಗ್ರಹಣ ಮಾಡಲು ಅಂದಿನ ಬಿಜೆಪಿ ಸರ್ಕಾರ ಬಿಡಲಿಲ್ಲ, ಸತತವಾಗಿ ಅಡ್ಡಿಪಡಿಸಿತು. ನನ್ನ ಅಧಿಕಾರಾವಧಿಯಲ್ಲಿ ನನ್ನ ಕೈಲಾದ ಮಟ್ಟಿಗೆ ಪಕ್ಷದ ಸಂಘಟನೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸಂಘಟನೆಯ ಹಾದಿಯಲ್ಲಿ ನನ್ನಿಂದಲೂ ಕೆಲವು ತಪ್ಪುಗಳಾಗಿರಬಹುದು. ಆದರೆ ನಾನು ಎಂದಿಗೂ ನಾಯಕನಾಗಿ ಮೆರೆಯಲಿಲ್ಲ, ನಾನು ಕೂಡ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ ಎಂದರು.

ಪಕ್ಷವನ್ನು ಅಧಿಕಾರಕ್ಕೆ ತರಲು ನಡೆಸಿದ ಹೋರಾಟಗಳ ಸರಣಿಯನ್ನು ವಿವರಿಸಿದ ಮುಖ್ಯಮಂತ್ರಿಗಳು, ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಕಷ್ಟದ ಕಾಲದಲ್ಲಿ ನಮ್ಮ ಶಾಸಕರೊಂದಿಗೆ ಜನರ ಸಮಸ್ಯೆಗಳಿಗೆ ಧಾವಿಸಿದೆವು. ಲಾಕ್‌ಡೌನ್‌ನಿಂದಾಗಿ ಬೆಲೆ ಕುಸಿತವಾಗಿ ತತ್ತರಿಸಿದ್ದ ರೈತರಿಗೆ ಧೈರ್ಯ ತುಂಬಿದೆವು. ಸ್ವತಃ ಕಾಂಗ್ರೆಸ್ ಪಕ್ಷದ ವತಿಯಿಂದಲೇ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ, ಸಾರಿಗೆ ಇಲಾಖೆಗೆ 1 ಕೋಟಿ ರೂಪಾಯಿ ಧನಸಹಾಯ ನೀಡಿ ವಲಸೆ ಕಾರ್ಮಿಕರು ಉಚಿತವಾಗಿ ತಮ್ಮ ಊರುಗಳಿಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದನ್ನು ನೆನಪಿಸಿದರು. ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 36 ಅಮಾಯಕ ಜನರು ಮೃತಪಟ್ಟ ದುರಂತದ ಜಾಗಕ್ಕೆ ನಾನೂ ಮತ್ತು ಸಿದ್ದರಾಮಯ್ಯ ಅವರು ಖುದ್ದಾಗಿ ಭೇಟಿ ನೀಡಿ, ಅಂದು ಅವರ ಕುಟುಂಬಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದೆವು. ಅದರಂತೆ ಇಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂತ್ರಸ್ತರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಿ ಮಾತು ಉಳಿಸಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.

ವಿರೋಧ ಪಕ್ಷದಲ್ಲಿದ್ದಾಗ ನಾವು ಹಗಲಿರುಳು ನಡೆಸಿದ ಹೋರಾಟಗಳಿಗೆ ಅಂದಿನ ಬಿಜೆಪಿ ಸರ್ಕಾರದ ಇಬ್ಬರು ಪ್ರಭಾವಿ ಮಂತ್ರಿಗಳು ರಾಜೀನಾಮೆ ನೀಡಬೇಕಾಯಿತು. ಇಡೀ ದೇಶದ ಗಮನ ಸೆಳೆದ ಪೇ ಸಿಎಂ (PayCM) ಅಭಿಯಾನದಂತಹ ಆಂದೋಲನಗಳನ್ನು ಹಮ್ಮಿಕೊಂಡೆವು. ರಾಜ್ಯದಲ್ಲಿ ಕ್ರಾಂತಿಕಾರಕವಾಗಿ 75 ಲಕ್ಷ ಜನರನ್ನು ಕಾಂಗ್ರೆಸ್ ಸದಸ್ಯರನ್ನಾಗಿ ನೋಂದಣಿ ಮಾಡಿಸಿದೆವು. ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಕೊರೊನಾ ಅಡ್ಡಿಗಳ ನಡುವೆಯೂ ಮೇಕೆದಾಟು ಬೃಹತ್ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸಿದೆವು. ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿಯವರ ದಂಡಿ ಯಾತ್ರೆಯ ನಂತರ ದೇಶದಲ್ಲಿ ಅಂತಹದ್ದೇ ದೊಡ್ಡ ಜನಾಂದೋಲನ ನಡೆದಿದ್ದರೆ ಅದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ. ಅಂದು ಬೆಳಗಾವಿಯಲ್ಲಿ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದ ನೆನಪಿಗಾಗಿ ನಾವು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡಿದ್ದೆವು. ಅಂದು ಗಾಂಧೀಜಿ ಕುಳಿತಿದ್ದ ಅದೇ ಪವಿತ್ರ ಜಾಗದಲ್ಲಿ ಇಂದು ನಮ್ಮ ಹೆಮ್ಮೆಯ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ ಎಂದು ಭಾಷಣದಲ್ಲಿ ಉಲ್ಲೇಖಿಸಿದರು. ಕೊನೆಯದಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಪಕ್ಷ ನನ್ನೊಬ್ಬನ ವೈಯಕ್ತಿಕ ಕೈಯಿಂದ ಅಧಿಕಾರಕ್ಕೆ ಬಂದಿಲ್ಲ. ಪಕ್ಷಕ್ಕಾಗಿ ಹಗಲಿರುಳು ರಕ್ತ ಹರಿಸಿದ ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ನಮಗೆ ವಿಧಾನಸಭೆಯಲ್ಲಿ ಬರೋಬ್ಬರಿ 136 ಸ್ಥಾನಗಳು ಬಂದು ಅಧಿಕಾರ ಸಿಕ್ಕಿದೆ. ಇಂತಹ ಬಲಿಷ್ಠ ಸಂಘಟನೆಯನ್ನು ಇಂದು ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಕೈಗೆ ಒಪ್ಪಿಸಿದ್ದೇನೆ. ಅವರ ನಾಯಕತ್ವದಲ್ಲಿ ಪಕ್ಷ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

Category
ಕರಾವಳಿ ತರಂಗಿಣಿ