image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೇಕೆದಾಟು ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ತಮಿಳುನಾಡಿಗೇ ನಷ್ಟ: ಸಚಿವ ರಾಮಲಿಂಗಾರೆಡ್ಡಿ

ಮೇಕೆದಾಟು ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ತಮಿಳುನಾಡಿಗೇ ನಷ್ಟ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಕೊರತೆಯುಂಟಾಗಿದ್ದು, ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸುವುದು ಕಷ್ಟವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕೆಆರ್‌ಎಸ್‌ನಲ್ಲಿ 11 ಟಿಎಂಸಿ ಹಾಗೂ ಕಬಿನಿಯಲ್ಲಿ 5 ಟಿಎಂಸಿ ಸೇರಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕೇವಲ 16 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದರಲ್ಲಿ ಕುಡಿಯುವ ನೀರಿಗೆ ಕಾಯ್ದಿರಿಸಿದರೆ ಕೃಷಿಗೆ ಬಳಸಲು ಕೇವಲ 3 ಟಿಎಂಸಿ ನೀರು ಮಾತ್ರ ಉಳಿಯಲಿದ್ದು, ವ್ಯವಸಾಯಕ್ಕೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಕಾವೇರಿ ನದಿ ಪಾತ್ರದಲ್ಲಿ ಒಟ್ಟು 114 ಟಿಎಂಸಿ ಸಾಮರ್ಥ್ಯದ ಹಾರಂಗಿ, ಹೇಮಾವತಿ, ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಿದ್ದು, ಮೇಕೆದಾಟು ಬಳಿ 67 ಟಿಎಂಸಿ ನೀರು ಸಂಗ್ರಹಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದರಿಂದ ಬೆಂಗಳೂರಿಗೆ 4.75 ಟಿಎಂಸಿ ಕುಡಿಯುವ ನೀರು ಸಿಗುವುದರ ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆಯೇ ಹೊರತು ಕೃಷಿಗೆ ನೀರನ್ನು ಬಳಸುವುದಿಲ್ಲ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಮಳೆ ಕಡಿಮೆಯಾದಾಗ ತಮಿಳುನಾಡಿಗೆ ಮಾಸಿಕ ಒಟ್ಟು 177.25 ಟಿಎಂಸಿ ನೀರು ಹರಿಸಲು ತೊಂದರೆಯಾಗುತ್ತದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದರೂ, ಅಲ್ಲಿನ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಹೋರಾಟದ ಮಾತುಗಳನ್ನಾಡುತ್ತಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ತಮಿಳುನಾಡಿನೊಂದಿಗೆ ಚರ್ಚಿಸಲು ಸಭೆ ನಿಗದಿಪಡಿಸುವಂತೆ ಮನವಿ ಮಾಡಲಾಗಿದ್ದು, ಮಾತುಕತೆಯ ಮೂಲಕವೇ ಈ ವಿವಾದ ಬಗೆಹರಿಸಿಕೊಳ್ಳಲು ಕರ್ನಾಟಕ ಸಿದ್ಧವಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ರೈತರಿಗೇ ಹೆಚ್ಚಿನ ಲಾಭವಾಗಲಿದ್ದು, ವಿರೋಧ ಮುಂದುವರಿಸಿದರೆ ಅವರಿಗೇ ನಷ್ಟವಾಗಲಿದೆ. ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರದಲ್ಲೇ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿ, ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಜೂನ್ 18 ರವರೆಗೆ 2 ಟಿಎಂಸಿ ನೀರನ್ನು ಬಿಡಲಾಗಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಕೊರತೆಯಾಗಿ ಬರಗಾಲ ಎದುರಾದರೆ ತಮಿಳುನಾಡಿಗೆ ನೀರು ಹರಿಸುವುದು ಮತ್ತಷ್ಟು ಕಷ್ಟವಾಗಲಿದೆ. ಇನ್ನು ಕೃಷ್ಣಾ ನದಿ ವಿವಾದದ ಅಂತಿಮ ತೀರ್ಪು ಬಂದು 14 ವರ್ಷ ಕಳೆದರೂ ಇನ್ನು ಅಧಿಸೂಚನೆ ಜಾರಿಯಾಗಿಲ್ಲ. ನೀರಿನ ಹಂಚಿಕೆ ಅವಧಿ 2050ಕ್ಕೆ ಮುಕ್ತಾಯಗೊಳ್ಳಲಿದ್ದು, ಇನ್ನು ಕೇವಲ 24 ವರ್ಷಗಳು ಮಾತ್ರ ಬಾಕಿ ಇವೆ. ಈ ಮಧ್ಯೆ, ಇದೇ ಜೂನ್ 25 ರಂದು ತುಂಗಾಭದ್ರಾ ಅಣೆಕಟ್ಟಿನ ಕ್ರಸ್ಟ್ ಗೇಟ್ ಉದ್ಘಾಟನೆಗೆ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಆಂಧ್ರಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು, ಅಲ್ಲಿ ಕೃಷ್ಣಾ ನದಿ ವಿವಾದದ ಕುರಿತು ಚರ್ಚಿಸಲು ಅವಕಾಶ ಸಿಗದಿದ್ದರೆ ದೆಹಲಿಯಲ್ಲಿ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.

Category
ಕರಾವಳಿ ತರಂಗಿಣಿ