image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೆಡಿಎಸ್‌ನಲ್ಲಿ ಹಿತಶತ್ರುಗಳ ಪತ್ತೆಗೆ ವಿಧಾನಪರಿಷತ್‌ ಚುನಾವಣೆ ಬಳಕೆಯಾಗಿದೆ: ಸಚಿವ ಎಚ್‌.ಡಿ. ಕುಮಾರಸ್ವಾಮಿ

ಜೆಡಿಎಸ್‌ನಲ್ಲಿ ಹಿತಶತ್ರುಗಳ ಪತ್ತೆಗೆ ವಿಧಾನಪರಿಷತ್‌ ಚುನಾವಣೆ ಬಳಕೆಯಾಗಿದೆ: ಸಚಿವ ಎಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್‌ ಪಕ್ಷದಲ್ಲಿರುವ ಹಿತಶತ್ರುಗಳು ಯಾರೆಂಬುದನ್ನು ಪತ್ತೆ ಹಚ್ಚುವ ಉದ್ದೇಶದಿಂದಲೇ ವಿಧಾನಪರಿಷತ್‌ ಚುನಾವಣೆಗೆ ನಮ್ಮ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಲಾಗಿತ್ತು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯು ನಮ್ಮ ಶಾಸಕರ ಪಕ್ಷ ನಿಷ್ಠೆಯ ಪರೀಕ್ಷೆಯಾಗಿತ್ತು. ವಿಧಾನಪರಿಷತ್‌ ಚುನಾವಣೆ ಫಲಿತಾಂಶದಿಂದ ಎಲ್ಲಾ ಸಂದೇಹಗಳಿಗೂ ಉತ್ತರ ದೊರೆತಿದೆ. ಜೊತೆಗೆ ಯಾರನ್ನೂ ಅತಿಯಾಗಿ ನಂಬಬಾರದು ಎಂಬ ಪಾಠವನ್ನು ಈ ಫಲಿತಾಂಶ ನಮಗೆ ಕಲಿಸಿದೆ. ಚುನಾವಣೆಯಲ್ಲಿ ನಮ್ಮ ಪಕ್ಷದ ಯಾವ ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯೂ ನಮ್ಮ ಬಳಿ ಇದೆ ಎಂದರು.

ಶಾಸಕರು ಯಾವ ಕಾರಣಕ್ಕಾಗಿ ಅಡ್ಡಮತದಾನ ಮಾಡಿದ್ದಾರೆಂಬುದು ಗೊತ್ತಿದೆ. ಪಕ್ಷ ತೊರೆಯುವ ಹಂತದವರೆಗೂ ಚರ್ಚೆ ಮಾಡಿ ಅವರು ಅಡ್ಡಮತದಾನ ಮಾಡಿದ್ದಾರೆ. ಪಕ್ಷ ತೊರೆದು ಹೋಗುವವರು ಹೋಗಲಿ, ಪಕ್ಷವನ್ನು ಸಂಘಟಿಸುವುದು ಹೇಗೆ ಎಂಬುದು ನಮಗೆ ಗೊತ್ತಿದೆ. ಮುಂಬರುವ ದಿನಗಳಲ್ಲಿ ಯುವಕರ ಮೂಲಕ ಪಕ್ಷವನ್ನು ಪುನರ್‌ ಸಂಘಟನೆ ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದಲ್ಲಿ ಸಚಿವನಾಗಿರುವುದು ತಾತ್ಕಾಲಿಕ ಅಷ್ಟೆ, ನನಗೆ ರಾಜ್ಯ ರಾಜಕಾರಣವೇ ಶಾಶ್ವತವಾಗಿದ್ದು, ಹೊಸದಾಗಿ ರಾಜ್ಯ ರಾಜಕಾರಣಕ್ಕೆ ಬರಬೇಕಾದ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಸಹಿಯನ್ನು ಎಂದಿಗೂ ಮಾರಾಟಕ್ಕೆ ಇಟ್ಟಿರಲಿಲ್ಲ. ಆದರೆ ನನ್ನ ಹಳೆಯ ಸ್ನೇಹಿತರು ಈಗ ಏನೇನೋ ಆಪಾದನೆ ಮಾಡುತ್ತಿದ್ದಾರೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ಲೇವಿನ್‌ನಂತಹ ಲಾಟರಿ ನಿಷೇಧ ಮಾಡುವ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಆಫರ್‌ ನೀಡಿ ಹೋಟೆಲ್‌ನಲ್ಲಿ ಹಣ ತಂದು ಇಟ್ಟುಕೊಂಡಿದ್ದರು. ಅದನ್ನೆಲ್ಲಾ ನಾನು ಜನರ ಹಿತಕ್ಕಾಗಿ ಧಿಕ್ಕರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ವಿಧಾನಪರಿಷತ್‌ ಹಾಗೂ ವಿಧಾನಸಭೆಗೆ ಕೆಲವರಿಗೆ ಟಿಕೆಟ್‌ ನೀಡಿದಾಗ ಅವರಿಂದ ಪಕ್ಷಕ್ಕೆ ದೇಣಿಗೆ ಪಡೆದಿದ್ದೇನೆಯೇ ಹೊರತು, ವೈಯಕ್ತಿಕ ಲಾಭಕ್ಕಾಗಿ ಪಕ್ಷದ ಟಿಕೆಟ್‌ ಮಾರಿಕೊಂಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡರ ಹೆಸರನ್ನು ಪ್ರಸ್ತಾಪಿಸಬೇಡಿ, ಅದೆಲ್ಲಾ ಮುಗಿದು ಹೋದ ಕಥೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಒಂದು ಕಾಲಲ್ಲ, ಎರಡು ಕಾಲನ್ನೂ ಈಗಾಗಲೇ ಪಕ್ಷದಿಂದ ಹೊರಗಿಟ್ಟಿದ್ದಾರೆ. ಈ ಹಿಂದೆ ಅವರ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವೇ ಅಂತಿಮವಾಗಿದೆ. ಜಿ.ಟಿ.ದೇವೇಗೌಡರು ಯಾವ ಯಾವ ಸಂದರ್ಭದಲ್ಲಿ ಯಾವಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಅವರ ಪೂರ್ವಾಪರ ತಿಳಿದೇ ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಜಿ.ಟಿ.ದೇವೇಗೌಡರ ಮೇಲೆ ವ್ಯಾಮೋಹ ಇರುವುದು ಸತ್ಯ. ಆದರೆ ಅವರು ಆ ವ್ಯಾಮೋಹವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಅದಕ್ಕೆ ನಾನು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಡದಿ ಟೌನ್‌ಶಿಪ್‌ ಯೋಜನೆ ವಿಚಾರದಲ್ಲಿ ನನ್ನ ಹೋರಾಟ ನಿರಂತರವಾಗಿದೆ ಮತ್ತು ರೈತರ ಜೊತೆ ನಿಂತು ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಬಿಡದಿ ಸೇರಿದಂತೆ 5 ಟೌನ್‌ಶಿಪ್‌ ನಿರ್ಮಾಣ ಮಾಡಲು ನಾನು ಮುಖ್ಯಮಂತ್ರಿಯಾಗಿದ್ದಾಗ ನಿರ್ಧಾರ ಮಾಡಿದ್ದು ಸತ್ಯ. ಆದರೆ ರೈತರ ವಿರೋಧ ವ್ಯಕ್ತವಾದ ಕೂಡಲೇ ಆ ಯೋಜನೆಯನ್ನು ಕೈಬಿಟ್ಟಿದ್ದೆ. ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ರೈತರ ಭೂಮಿಯನ್ನು ಲೂಟಿ ಮಾಡಲು ಯಾರಿಗೂ ಬಿಡುವುದಿಲ್ಲ. ಮುಂದೆ ಸದನದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.

Category
ಕರಾವಳಿ ತರಂಗಿಣಿ