ಬೆಂಗಳೂರು : ಹಾಲಿ ಕಾಂಗ್ರೆಸ್ ಸರ್ಕಾರ ಬಿಡದಿ ಟೌನ್‌ಶಿಪ್ ಯೋಜನೆಗೆ ಕೈಹಾಕುತ್ತಿದ್ದಂತೆ ರೈತರು ನಿರಂತರ ಪ್ರತಿಭಟನೆ ಆರಂಭಿಸಿದ್ದು, ಇತ್ತೀಚೆಗೆ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಯೋಜನೆಯ ಹಳೆಯ ಇತಿಹಾಸವನ್ನು ನೆನಪಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ವಿಪಕ್ಷ ನಾಯಕರಿಗೆ ಸರಣಿ ಪ್ರಶ್ನೆಗಳನ್ನು ಕೇಳಿರುವ ಅವರು, ಈ ಯೋಜನೆ ಶುರುವಾಗಿದ್ದು ಯಾರಿಂದ ಎಂಬುದನ್ನು ಅಧಿಕೃತ ದಾಖಲೆಗಳ ಸಮೇತ ಬಿಚ್ಚಿಟ್ಟಿದ್ದಾರೆ.
2006ರಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದು ಯಾರು ಎಂದು ಪ್ರಶ್ನಿಸಿರುವ ಸಚಿವರು, 2006ರ ಸೆಪ್ಟಂಬರ್ 23 ರಂದು ಆಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರವೇ ಬಿಡದಿ ಸೇರಿದಂತೆ 5 ಸಮಗ್ರ ಟೌನ್‌ಶಿಪ್‌ಗಳ ಅಭಿವೃದ್ಧಿಗೆ ಅಧಿಕೃತ ತೀರ್ಮಾನ ಕೈಗೊಂಡಿತ್ತು ಎಂದು ವಿವರಿಸಿದ್ದಾರೆ. ತದನಂತರ 2006ರ ಅಕ್ಟೋಬರ್ 18 ರಂದು ಯೋಜನೆಗೆ ಅಂದಿನ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿತು. ಮಾರನೇ ವರ್ಷ ಅಂದರೆ 2007ರ ಜೂನ್ 11 ರಂದು ಬಿಡದಿ ಟೌನ್‌ಶಿಪ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಯಿತು. ಈ ನಿರ್ಣಾಯಕ ಸಮಯದಲ್ಲಿ ಇಂದಿನ ವಿಪಕ್ಷ ನಾಯಕರಾಗಿರುವ ಆರ್. ಅಶೋಕ್ ಅವರೇ ಸಚಿವರಾಗಿದ್ದರು ಎಂಬುದನ್ನು ರಾಮಲಿಂಗಾ ರೆಡ್ಡಿ ನೆನಪಿಸಿದ್ದಾರೆ.
ಇಷ್ಟಕ್ಕೇ ನಿಲ್ಲದೆ, 2010 ಜೂನ್ 01ರಂದು ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಯೋಜನೆಗಾಗಿ ಮರು ಟೆಂಡರ್ ಕರೆಯಲಾಗಿತ್ತು. ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವೇ ಟೌನ್‌ಶಿಪ್ ಅನುಷ್ಠಾನಕ್ಕಾಗಿ 2012 ಜುಲೈ 26ರಂದು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿತ್ತು. ಕಳೆದ ಆರು ವರ್ಷಗಳ ಹಿಂದೆ ಅಂದರೆ 2020ರ ಮೇ 18ರಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 9,000 ಎಕರೆ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್ ಅಭಿವೃದ್ಧಿಪಡಿಸುವ ಬಗ್ಗೆ ಪ್ರಮುಖ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಯಿತು. ಆಗಲೂ ಆರ್. ಅಶೋಕ್ ಅವರೇ ಸಚಿವರಾಗಿದ್ದರು ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಅವರ ಸರ್ಕಾರ 2022ರ ಮಾರ್ಚ್ 4ರಂದು ಮಂಡಿಸಿದ ಬಜೆಟ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ಅಭಿವೃದ್ಧಿಯನ್ನು ಘೋಷಿಸಿತ್ತು. ಅಷ್ಟೇ ಅಲ್ಲದೆ ಯೋಜನೆ ಅನುಷ್ಠಾನಕ್ಕಾಗಿ ಅದೇ ವರ್ಷ ಮೇ 13 ರಂದು ಮತ್ತೊಂದು ಉನ್ನತ ಮಟ್ಟದ ಸಮಿತಿ ರಚನೆ ಮಾಡಿತ್ತು. ಆಗ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಸರ್ಕಾರದ ಪ್ರಮುಖ ಸಚಿವರಾಗಿದ್ದರು ಎಂಬುದನ್ನು ವಿಪಕ್ಷ ನಾಯಕರಿಗೆ ಸಚಿವರು ನೆನಪಿಸಿದರು. ಅಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಕೈಗೊಂಡ ನಿರ್ಧಾರಗಳು ಅಭಿವೃದ್ಧಿ ಎನ್ನುವುದಾದರೆ, ಇಂದು ಅದೇ ಯೋಜನೆಯನ್ನು ಅನುಷ್ಠಾನ ಮಾಡಲು ಹೊರಟಿರುವುದು ಮಾತ್ರ ಹೇಗೆ ತಪ್ಪಾಗುತ್ತದೆ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಬಿಡದಿ ಟೌನ್‌ಶಿಪ್ ಯಾವುದೇ ಹೊಸ ಯೋಜನೆಯಲ್ಲ, ಇದು ಕಳೆದ ಎರಡು ದಶಕಗಳಿಂದ ವಿವಿಧ ಸರ್ಕಾರಗಳು ಮುಂದುವರಿಸಿಕೊಂಡು ಬಂದಿರುವ ಹಳೆಯ ಯೋಜನೆ ಎಂದು ಸ್ಪಷ್ಟಪಡಿಸಿರುವ ರಾಮಲಿಂಗಾ ರೆಡ್ಡಿ, ಪ್ರಸ್ತುತ ಕಾಂಗ್ರೆಸ್ ಸರ್ಕಾರವು ರೈತರಿಗೆ ನ್ಯಾಯಸಮ್ಮತ ಪರಿಹಾರ, ಪಾರದರ್ಶಕ ಪ್ರಕ್ರಿಯೆ ಹಾಗೂ ಕಾನೂನುಬದ್ಧ ರಕ್ಷಣೆಗಳೊಂದಿಗೆ ಯೋಜನೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂದಿದ್ದಾರೆ. ಇತಿಹಾಸವನ್ನು ಯಾರಿಗೂ ಅಳಿಸಲು ಸಾಧ್ಯವಿಲ್ಲ, ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತವೆ. ಆದ್ದರಿಂದ ವಿರೋಧ ಪಕ್ಷಗಳು ಸುಳ್ಳು ಪ್ರಚಾರವನ್ನು ನಿಲ್ಲಿಸಿ ರಾಜ್ಯದ ಅಭಿವೃದ್ಧಿಗೆ ಬೆಂಬಲ ನೀಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.