image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಶಾಸಕರಿಂದ ಅಡ್ಡಮತದಾನ ಶಂಕೆ, ರಣತಂತ್ರ ಬದಲಿಸಿದ ಬಿಜೆಪಿ

ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಶಾಸಕರಿಂದ ಅಡ್ಡಮತದಾನ ಶಂಕೆ, ರಣತಂತ್ರ ಬದಲಿಸಿದ ಬಿಜೆಪಿ

ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌‍ ಶಾಸಕರೊಬ್ಬರು ಅಡ್ಡಮತದಾನ ಮಾಡಿರಬಹುದು ಎಂಬ ತೀವ್ರ ಅನುಮಾನದ ಹಿನ್ನೆಲೆಯಲ್ಲಿ, ಬಿಜೆಪಿ ಕೊನೆ ಕ್ಷಣದಲ್ಲಿ ತನ್ನ ಚುನಾವಣಾ ರಣತಂತ್ರವನ್ನು ಬದಲಾಯಿಸಿ ತನ್ನ ಅಭ್ಯರ್ಥಿಗಳಿಗೆ ತಲಾ 30 ಮತಗಳನ್ನು ನಿಗದಿಪಡಿಸಿದೆ. ಮೊದಲಿನ ಯೋಜನೆಯಂತೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ರಘು ಕೌಟಿಲ್ಯ ಮತ್ತು ಲಿಂಗರಾಜ್‌ ಪಾಟೀಲ್‌ಗೆ ತಲಾ 29 ಮತಗಳನ್ನು ನಿಗದಿಪಡಿಸಿ, ಉಳಿದಿರುವ ಹೆಚ್ಚುವರಿ ಮತಗಳನ್ನು ಜೆಡಿಎಸ್‌‍ ಅಭ್ಯರ್ಥಿ ಗೋವಿಂದರಾಜ್‌ಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಮತದಾನ ಆರಂಭವಾಗುತ್ತಿದ್ದಂತೆ ಜೆಡಿಎಸ್‌‍ನ ಪ್ರಭಾವಿ ಶಾಸಕರೊಬ್ಬರು ಏಕಾಂಗಿಯಾಗಿ ಬಂದು ಯಾರಿಗೂ ಹೇಳದಂತೆ ಮತ ಚಲಾವಣೆ ಮಾಡಿ ಹೋಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ವಿಧಾನಸೌಧದ ಪಡಸಾಲೆಯಲ್ಲಿ ಈ ಸುದ್ದಿ ಒಂದು ಕ್ಷಣ ಮಿಂಚಿನ ಸಂಚಾರ ಉಂಟುಮಾಡಿತಲ್ಲದೆ, ಜೆಡಿಎಸ್‌‍ನ ಮೈಸೂರು ಭಾಗದ ಈ ಪ್ರಭಾವಿ ಶಾಸಕರು ಕಾಂಗ್ರೆಸ್‌‍ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆಂಬ ಗುಸುಗುಸು ದಟ್ಟವಾಗಿ ಹಬ್ಬಿತು.

ನಿಯಮಗಳ ಪ್ರಕಾರ ವಿಧಾನ ಪರಿಷತ್‌ ಚುನಾವಣೆಯು ಗುಪ್ತ ಮತದಾನವಾಗಿರುವುದರಿಂದ ಯಾವ ಶಾಸಕ ಯಾವ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂಬುದು ಬಹಿರಂಗವಾಗಿ ಗೊತ್ತಾಗುವುದಿಲ್ಲ. ಆದರೆ ಶಾಸಕರ ನಡವಳಿಕೆ ಮೇಲಿಂದಲೇ ಇಂಥವರು ಇಂತಹ ಅಭ್ಯರ್ಥಿಗೆ ಮತ ಚಲಾಯಿಸಿರಬಹುದೆಂಬ ಶಂಕೆ ವ್ಯಕ್ತವಾಗುತ್ತದೆ. ಯಾವಾಗ ಈ ಪ್ರಭಾವಿ ಶಾಸಕರು ಕಾಂಗ್ರೆಸ್‌‍ಗೆ ಮತ ಹಾಕಿದ್ದಾರೆಂಬ ವದಂತಿ ಹಬ್ಬಿತೋ, ತಕ್ಷಣವೇ ಎಚ್ಚೆತ್ತ ಬಿಜೆಪಿ ತನ್ನ ರಣತಂತ್ರ ಬದಲಾಯಿಸಿತು. ತನ್ನ ಅಭ್ಯರ್ಥಿಗಳಿಗೆ ಈ ಮುನ್ನ ನಿಗದಿಪಡಿಸಿದ 29 ಮತಗಳಿಗಿಂತ ಹೆಚ್ಚಾಗಿ 30 ಮತಗಳನ್ನು ಚಲಾಯಿಸುವಂತೆ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌ ಶಾಸಕರಿಗೆ ಸೂಚನೆ ಕೊಟ್ಟರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ತಮ್ಮೆಲ್ಲ ಶಾಸಕರನ್ನು ಕೊಠಡಿಗೆ ಕರೆಸಿ, ಪಕ್ಷದ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 30 ಮತಗಳನ್ನು ಚಲಾವಣೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಿಜೆಪಿಯ ಈ ಹಠಾತ್ ನಿರ್ಧಾರದಿಂದಾಗಿ ಜೆಡಿಎಸ್‌‍ ಅಭ್ಯರ್ಥಿಗೆ ಬಿಜೆಪಿಯಿಂದ ಹೆಚ್ಚುವರಿಯಾಗಿ ಸಿಗಬೇಕಿದ್ದ ಮತಗಳ ಪ್ರಮಾಣ ಕುಸಿದಿದ್ದು, ಕೇವಲ ಮೂರು ಮತಗಳು ಮಾತ್ರ ವರ್ಗಾವಣೆಯಾದಂತಾಗಿದೆ. ಈ ದಿಢೀರ್ ಬೆಳವಣಿಗೆಯು ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

Category
ಕರಾವಳಿ ತರಂಗಿಣಿ