ಉತ್ತರ ಪ್ರದೇಶ : ಮುಂಬರುವ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಹಾಗೂ ರಾಜ್ಯ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅವರು ಸಮಾಜವಾದಿ ಪಕ್ಷದ ಭವಿಷ್ಯದ ಕುರಿತು ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳನ್ನು ಮರೆತುಬಿಡಿ ಎಂದಿರುವ ರಾಜ್‌ಭರ್, ಸಮಾಜವಾದಿ ಪಕ್ಷದಲ್ಲಿ ಶೀಘ್ರದಲ್ಲೇ ದೊಡ್ಡ ಸೀಳು ಉಂಟಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇಡೀ ಪಕ್ಷವೇ ಭಾರತೀಯ ಜನತಾ ಪಕ್ಷವನ್ನು ಸೇರಲು ಸಿದ್ಧವಾಗಿ ಕುಳಿತಿದೆ ಎಂದು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಎಸ್‌ಪಿ ಪ್ರಮುಖ ನಾಯಕ ರಾಮ್ ಗೋಪಾಲ್ ಯಾದವ್ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಹಸ್ಯ ಪತ್ರ ಬರೆದಿದ್ದಾರೆ ಎಂದು ರಾಜ್‌ಭರ್ ಉಲ್ಲೇಖಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಬಹುಕೋಟಿ ಗಣಿಗಾರಿಕೆ ಹಗರಣ ಹಾಗೂ ಗೋಮತಿ ರಿವರ್ ಫ್ರಂಟ್ ಹಗರಣಗಳ ಅಸಲಿ ಮಾಸ್ಟರ್‌ಮೈಂಡ್ ಯಾರೆಂದು ಜನರಿಗೆ ತಿಳಿದಿದೆ. ಪ್ರಸ್ತುತ ತನಿಖಾ ಸಂಸ್ಥೆಗಳ ಬಿಗಿ ಹಿಡಿತದಿಂದಾಗಿ ಎಸ್‌ಪಿ ನಾಯಕರಲ್ಲಿ ಆತಂಕ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಅವರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದು ರಾಜ್‌ಭರ್ ಟೀಕಿಸಿದ್ದಾರೆ. ಚುನಾವಣೆಯ ಹೊಸ್ತಿಲಿನಲ್ಲಿ ರಾಜ್‌ಭರ್ ಸಿಡಿಸಿರುವ ಈ ರಾಜಕೀಯ ಬಾಂಬ್, ಉತ್ತರ ಪ್ರದೇಶದ ರಾಜಕೀಯ ಸಮೀಕರಣಗಳನ್ನು ಬದಲಾಯಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.