image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿ.ಕೆ.ಸುರೇಶ್ ಭೇಟಿಯಾದ ಜಮೀರ್ ಅಹ್ಮದ್: ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ ಎಂದ ಮಾಜಿ ಸಚಿವ!

ಡಿ.ಕೆ.ಸುರೇಶ್ ಭೇಟಿಯಾದ ಜಮೀರ್ ಅಹ್ಮದ್: ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ ಎಂದ ಮಾಜಿ ಸಚಿವ!

ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿಯಾಗಿ ಕೆಲ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಭೇಟಿಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ನಮ್ಮದು ಹೈಕಮಾಂಡ್ ಸಂಸ್ಕೃತಿಯ ಪಕ್ಷವಾಗಿದ್ದು, ಎಲ್ಲಾ ಅಂತಿಮ ನಿರ್ಧಾರಗಳನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಮೊದಲ ಪಟ್ಟಿಯಲ್ಲಿಯೇ ತಮಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗುವ ಸಂಪೂರ್ಣ ವಿಶ್ವಾಸವಿದೆ. ಒಂದು ವೇಳೆ ಸ್ಥಾನ ಸಿಗದಿದ್ದರೂ ತಮಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದರು. ತಾವು ಎಲ್ಲೂ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದ ಅವರು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಮಂತ್ರಿ ಸ್ಥಾನ ನೀಡುವಂತೆ ಪ್ರತಿಭಟನೆ ನಡೆಸಿ ಕೇಳುವುದು ಸಹಜ ಪ್ರಕ್ರಿಯೆಯಾಗಿದೆ ಎಂದರು.

ಮುಂದುವರಿದು ಮಾತನಾಡಿದ ಅವರು, ಸಚಿವ ಸ್ಥಾನ ಸಿಗದಿರುವುದಕ್ಕೆ ತಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ ಎಂಬುದನ್ನು ಒತ್ತಿ ಹೇಳಿದರು. ತಾವು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಆಪ್ತರಾಗಿದ್ದು, ಈಗಾಗಲೇ ಕೇರಳ ಹಾಗೂ ತೆಲಂಗಾಣ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಯಶಸ್ವಿಯಾಗಿ ಪ್ರಚಾರ ನಡೆಸಿರುವುದನ್ನು ನೆನಪಿಸಿಕೊಂಡರು. ಇದೇ ವೇಳೆ ವಿಧಾನಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಜಮೀರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದಾಗಿ ತಿಳಿಸಿದರು. ಪಕ್ಷದ ಎಲ್ಲಾ 140 ಶಾಸಕರು ಅತ್ಯಂತ ಒಗ್ಗಟ್ಟಾಗಿದ್ದಾರೆ. ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 28 ಶಾಸಕರ ಮತಗಳು ಸಾಕಾಗಲಿದ್ದು, ನಮ್ಮ ಸಂಖ್ಯಾಬಲದ ಆಧಾರದ ಮೇಲೆ ನಾವು ಸುಲಭವಾಗಿ ಗೆಲ್ಲಲಿದ್ದೇವೆ. ನಮಗೆ ಯಾವುದೇ ಹೆಚ್ಚುವರಿ ಮತಗಳ ಅಗತ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ