ಹುಬ್ಬಳ್ಳಿ: ಕರ್ನಾಟಕದಲ್ಲಿ ರಸಗೊಬ್ಬರದ ಕೊರತೆ ಇಲ್ಲದಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರವು ಅನಗತ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗುತ್ತಿದ್ದಂತೆಯೇ ರಸಗೊಬ್ಬರ ಅಭಾವದ ಸೃಷ್ಟಿತ ಸಮಸ್ಯೆಯನ್ನು ಬಿಂಬಿಸಿ ಕೇಂದ್ರವನ್ನು ದೂಷಿಸುತ್ತಿರುವ ರಾಜ್ಯ ಸರ್ಕಾರದ ನಡೆಯು ಸಂಪೂರ್ಣ ಆಡಳಿತ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ ಎಂದು ಅವರು ಟೀಕಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಇರಾನ್-ಇಸ್ರೇಲ್ ಸಂಘರ್ಷ ಸೇರಿದಂತೆ ವಿವಿಧ ಸವಾಲುಗಳಿದ್ದರೂ, ಕೇಂದ್ರ ಸರ್ಕಾರವು ಕರ್ನಾಟಕದ ರೈತರ ಹಿತದೃಷ್ಟಿಯಿಂದ 2026ರ ಮುಂಗಾರು (ಖಾರಿಫ್) ಹಂಗಾಮಿಗೆ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರವನ್ನು ಪೂರೈಕೆ ಮಾಡಿದೆ. ದೇಶೀಯವಾಗಿ ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸಿದ್ದಲ್ಲದೆ, ಆಮದು ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ರಾಜ್ಯಕ್ಕೆ ಅಗತ್ಯವಿರುವ ದಾಸ್ತಾನು ಖಾತ್ರಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಮುಂಗಾರು ಹಂಗಾಮಿಗೂ ಮುನ್ನವೇ, ಅಂದರೆ ಜನವರಿ-ಮಾರ್ಚ್ ಅವಧಿಯಲ್ಲಿಯೇ ನಿಗದಿತ ಗುರಿಗಿಂತ ಅಧಿಕ ಪ್ರಮಾಣದ ಯೂರಿಯಾ, ಡಿಎಪಿ ಮತ್ತು ಎನ್‌ಪಿಕೆಎಸ್ ರಸಗೊಬ್ಬರವನ್ನು ಕರ್ನಾಟಕಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜೂನ್ 10ರ ವರೆಗಿನ ಅಂಕಿಅಂಶಗಳ ಪ್ರಕಾರ, ಯೂರಿಯಾಕ್ಕೆ 3.13 ಲಕ್ಷ ಮೆಟ್ರಿಕ್ ಟನ್ (LMT) ಅಗತ್ಯವಿದ್ದರೆ, 5.59 LMT ಲಭ್ಯತೆಯನ್ನು ಖಾತರಿಪಡಿಸಲಾಗಿದೆ. ಇದರಲ್ಲಿ 2.47 LMT ಮಾರಾಟವಾಗಿದ್ದರೂ, ಇನ್ನೂ 3.12 LMT ದಾಸ್ತಾನು ಲಭ್ಯವಿದೆ. ಹಾಗೆಯೇ, ಡಿಎಪಿ ಮತ್ತು ಎನ್‌ಪಿಕೆಎಸ್ ರಸಗೊಬ್ಬರಗಳೂ ಸಹ ಬೇಡಿಕೆಗಿಂತ ಅಧಿಕ ಪ್ರಮಾಣದಲ್ಲಿ ದಾಸ್ತಾನಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರವು ಜಿಲ್ಲಾವಾರು ರಸಗೊಬ್ಬರ ಹಂಚಿಕೆಯಲ್ಲಿ ಸಮರ್ಪಕ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಮತ್ತು ರಸಗೊಬ್ಬರ ಸಾಗಣೆಯಲ್ಲಿನ ದಾಸ್ತಾನು ದಂಧೆ ಹಾಗೂ ಕಾಳಸಂತೆಯನ್ನು ತಡೆಯಲು ವಿಫಲವಾಗಿರುವುದು ರೈತರಿಗೆ ಉಂಟಾಗಿರುವ ತೊಂದರೆಗೆ ಮುಖ್ಯ ಕಾರಣ ಎಂದು ಜೋಶಿ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತ ಕಾಯಲು ಸದಾ ಬದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.