image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟಿಎಂಸಿ ಇಬ್ಭಾಗದ ಅಂಚಿನಲ್ಲಿ: ಮಮತಾ ಬ್ಯಾನರ್ಜಿಗೆ ಬಂಡಾಯದ ಶಾಕ್, 4000 ಇವಿಎಂ ಭಸ್ಮ

ಟಿಎಂಸಿ ಇಬ್ಭಾಗದ ಅಂಚಿನಲ್ಲಿ: ಮಮತಾ ಬ್ಯಾನರ್ಜಿಗೆ ಬಂಡಾಯದ ಶಾಕ್, 4000 ಇವಿಎಂ ಭಸ್ಮ

ಪಶ್ಚಿಮ ಬಂಗಾಳ : ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಇಬ್ಭಾಗವಾಗುವ ಆತಂಕ ಎದುರಿಸುತ್ತಿದೆ. ರಾಜ್ಯದಲ್ಲಿ ಪಕ್ಷವು ನೆಲೆ ಕಳೆದುಕೊಂಡ ಬೆನ್ನಲ್ಲೇ ಲೋಕಸಭೆಯ 19 ಸಂಸದರು ಬಂಡಾಯ ಎದ್ದಿದ್ದು, ತಾವೇ 'ಅಸಲಿ ಟಿಎಂಸಿ' ಎಂದು ಗುರುತಿಸುವಂತೆ ಲೋಕಸಭೆ派 ಸ್ಪೀಕರ್ ಓಂ ಬಿರ್ಲಾ ಅವರಿಗೆ ಸೋಮವಾರ ಅಧಿಕೃತವಾಗಿ ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ. ಒಂದು ವೇಳೆ ಸ್ಪೀಕರ್ ಈ ಬಣಕ್ಕೆ ಮಾನ್ಯತೆ ನೀಡಿದರೆ, 28 ವರ್ಷಗಳ ಹಿಂದೆ ತಾವೇ ಕಟ್ಟಿ ಬೆಳೆಸಿದ ಪಕ್ಷದಿಂದ ಮಮತಾ ಬ್ಯಾನರ್ಜಿ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಬಂಡಾಯ ಬಣದ ಸಂಸದ ಜಗದೀಶ್ ಚಂದ್ರ ಬರ್ಮಾ, ನಾವು ಈಗಾಗಲೇ ಸ್ಪೀಕರ್ ಅವರಿಗೆ ಪತ್ರ ಸಲ್ಲಿಸಿದ್ದೇವೆ ಹಾಗೂ ಸೋಮವಾರ ಅವರನ್ನ ಖುದ್ದಾಗಿ ಭೇಟಿಯಾಗಿ ನಿಜವಾದ ಟಿಎಂಸಿ ಸಂಸದೀಯ ಗುಂಪು ರಚಿಸಲು ಹಕ್ಕು ಮಂಡಿಸಲಿದ್ದೇವೆ ಮತ್ತು ನಮಗೆ ಅಧಿಕೃತ ಮಾನ್ಯತೆ ನೀಡುವಂತೆ ವಿನಂತಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಸಂಬಂಧ 19 ಸಂಸದರ ಸಹಿ ಸಂಗ್ರಹಿಸಲಾಗಿದ್ದು, ಬಂಡಾಯವೆದ್ದವರ ಸಂಖ್ಯೆ ಒಟ್ಟು ಸಂಸದರ ಮೂರನೇ ಎರಡಕ್ಕಿಂತ ಹೆಚ್ಚಿರುವುದರಿಂದ ಇವರಿಗೆ ಮಾನ್ಯತೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಈ ಬಂಡಾಯ ಬಣದ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಅವರ ಬಣದಲ್ಲಿ ಸಂಸದರ ಸಂಖ್ಯೆ ತೀರಾ ಕುಸಿದಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ ಶತಾಬ್ದಿ ರಾಯ್, ಮಮತಾ ಬ್ಯಾನರ್ಜಿ ಅವರು ನಮ್ಮನ್ನು ಸಂಪರ್ಕಿಸಿಲ್ಲ ಮತ್ತು ಸದ್ಯ ಅವರ ಬಳಿ ಕೇವಲ 6 ರಿಂದ 7 ಸಂಸದರು ಮಾತ್ರ ಉಳಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಂಡಾಯ ಸಂಸದರು ಮಮತಾ ಅವರನ್ನು ಪಕ್ಷದಿಂದ ಹೊರಹಾಕುವ ಬಗ್ಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಸ್ಪೀಕರ್ ಬಂಡಾಯ ಬಣವನ್ನು ಅಸಲಿ ಎಂದು ಗುರುತಿಸಿದರೆ, ಮಮತಾ ಬ್ಯಾನರ್ಜಿ ಅವರು ನ್ಯಾಯಾಲಯದ ಮೆಟ್ಟಿಲೇರುವುದು ಖಚಿತ. ಅಲ್ಲಿಯೂ ಹಿನ್ನಡೆಯಾದರೆ ಬಂಡಾಯ ಬಣ ಮಮತಾ ಅವರನ್ನು ಪಕ್ಷದಿಂದ ಉಚ್ಛಾಟಿಸಬಹುದು ಅಥವಾ ಅವರೇ ಸ್ವತಃ ಹೊರಬರಬೇಕಾಗಬಹುದು.

ಇದೇ ವೇಳೆ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಕಳೆದ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಚೋದನಾತ್ಮಕ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಧರ್ಮತಾಲದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ್ದ ಮಮತಾ, ನಿರ್ದಿಷ್ಟ ಸಮುದಾಯವೊಂದು ಹಿಂದೂಗಳ ಮೇಲೆ ದಾಳಿ ಮಾಡಿದರೆ, ಹಿಂದೂಗಳನ್ನು ಕೇವಲ 5 ನಿಮಿಷಗಳಲ್ಲಿ ಮುಗಿಸಿಬಿಡಬಹುದು ಎಂದು ಹೇಳಿದ್ದರು ಎನ್ನಲಾಗಿದೆ. ಈ ಹೇಳಿಕೆಯು ಸಾಮಾಜಿಕ ಶಾಂತಿ ಕದಡುತ್ತದೆ ಎಂದು ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಕೋಲ್ಕತಾದ ಹರೇ ಸ್ಟ್ರೀಟ್ ಪೊಲೀಸರು ಮೊಕದ್ದಮೆ ಹೂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಕಾಲ ನಿರಂತರ ಅಧಿಕಾರ ನಡೆಸಿದ ಪ್ರಬಲ ಪಕ್ಷ ಇಭ್ಭಾಗವಾಗುವ ಹಂತಕ್ಕೆ ಬಂದು ನಿಂತಿರುವುದರಿಂದ, ಪಕ್ಷದ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಯಾರ ಪಾಲಾಗುತ್ತದೆ ಎಂಬ ಕುತೂಹಲ ಮೂಡಿದೆ. 2025ರ ಆದಾಯ ತೆರಿಗೆ ರಿಟರ್ನ್ಸ್ ಪ್ರಕಾರ, 2024-25ರ ಸಾಲಿನಲ್ಲಿ ಟಿಎಂಸಿ ತನ್ನ ಆದಾಯ 219.35 ಕೋಟಿ ರು. ಎಂದು ಘೋಷಿಸಿಕೊಂಡಿತ್ತು. ಇದರಲ್ಲಿ 184.08 ಕೋಟಿ ರು. ದೇಣಿಗೆ ಮತ್ತು 33.685 ಕೋಟಿ ರು. ಸ್ಥಿರ ಠೇವಣಿಯ ಬಡ್ಡಿಯಾಗಿದೆ. ಅಷ್ಟೇ ಅಲ್ಲದೆ, ಚುನಾವಣಾ ಬಾಂಡ್‌ಗಳು ರದ್ದಾಗುವ ಮುನ್ನ ಟಿಎಂಸಿ ಬರೋಬ್ಬರಿ 1,609.5 ಕೋಟಿ ರು. ಸಂಗ್ರಹಿಸಿತ್ತು. ಎಡಿಆರ್ ವರದಿಯ ಪ್ರಕಾರ, ದೇಶದ ಪ್ರಾದೇಶಿಕ ಪಕ್ಷಗಳ ಪೈಕಿ ಟಿಡಿಪಿ ನಂತರ ಅತಿ ಹೆಚ್ಚು ಆಸ್ತಿ ಹೊಂದಿರುವುದು ಇದೇ ಟಿಎಂಸಿ.

ಈಗಾಗಲೇ ವಿಧಾನಸಭಾ ಮಟ್ಟದಲ್ಲಿ 56 ಶಾಸಕರೊಂದಿಗೆ ಬಂಡಾಯ ಎದ್ದಿರುವ ಋತಬ್ರತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನೆಂದು ಘೋಷಿಸಲಾಗಿದೆ. ಒಂದು ವೇಳೆ ಪಕ್ಷ ಅಧಿಕೃತವಾಗಿ ಎರಡು ಭಾಗವಾದರೆ, ಚುನಾವಣಾ ಆಯೋಗವು ಯಾವ ಬಣಕ್ಕೆ 'ಜೋಡಿ ಹೂವು' ಚಿಹ್ನೆ ನೀಡುತ್ತದೆಯೋ, ಆ ಬಣಕ್ಕೇ ಪಕ್ಷದ ಸಂಪೂರ್ಣ ಆಸ್ತಿ ಸೇರಲಿದೆ. ಒಂದು ವೇಳೆ ಬಂಡಾಯ ಬಣವೇ ಅಸಲಿ ಟಿಎಂಸಿ ಎಂದು ಗುರುತಿಸಲ್ಪಟ್ಟು, ಅದು ಮುಂದೆ ಬಿಜೆಪಿ ಜೊತೆ ವಿಲೀನವಾದರೆ ಟಿಎಂಸಿಯ ಸಂಪೂರ್ಣ ನಿಧಿಯು ಬಿಜೆಪಿಯ ಪಾಲಾಗುವ ಸಾಧ್ಯತೆಯೂ ಇದೆ.

ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿರುವ ನಡುವೆಯೇ ಕೋಲ್ಕತಾದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. ಬುಧವಾರದಂದು ಸುಮಾರು 4,000 ಇವಿಎಂ ಯಂತ್ರಗಳನ್ನು ಇರಿಸಲಾಗಿದ್ದ ಸರ್ಕಾರಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಇವುಗಳಲ್ಲಿ ಇತ್ತೀಚಿನ ಚುನಾವಣೆಯ 10 ವಿಧಾನಸಭಾ ಕ್ಷೇತ್ರಗಳ ಮತಗಳು ಶೇಖರಣೆಯಾಗಿದ್ದವು ಎನ್ನಲಾಗಿದೆ. ಸುಮಾರು 24 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಬೆಂಕಿ ಹತೋಟಿಗೆ ಬಂದಿದ್ದು, ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಗಂಭೀರತೆ ಅರಿತ ಕೋಲ್ಕತಾ ಪೊಲೀಸರು ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ.

ಈ ಬೆಂಕಿ ಅವಘಡದ ಕುರಿತು ಸಂಶಯ ವ್ಯಕ್ತಪಡಿಸಿರುವ ಸಚಿವ ಕೌಶಿಕ್ ಚೌಧರಿ, ಇದು ಆಕಸ್ಮಿಕವಾಗಿ ನಡೆದ ಬೆಂಕಿಯಂತೆ ಕಾಣುತ್ತಿಲ್ಲ. ಮೊದಲು ಕಟ್ಟಡದ 2 ಮತ್ತು 3ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ, ಮಧ್ಯದ ಅಂತಸ್ತುಗಳಿಗೆ ಯಾವುದೇ ಹಾನಿ ಮಾಡದೆ ನೇರವಾಗಿ 7 ಮತ್ತು 8ನೇ ಮಹಡಿಗೆ ತಲುಪಿದ್ದು ಹೇಗೆ ಎಂದು ಪ್ರಶ್ನಿಸಿದ್ದು, ಇದರ ಹಿಂದೆ ವಿಧ್ವಂಸಕ ಕೃತ್ಯ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದೇಶದ ಗಮನ ಸೆಳೆದಿದೆ.

Category
ಕರಾವಳಿ ತರಂಗಿಣಿ