ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹಿರಿಯ ನಾಯಕ ಸಿದ್ದರಾಮಯ್ಯ ಅವರ 'ಕಾವೇರಿ' ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜಮೀರ್ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ ಕೇವಲ ಒಂದು ದಿನದ ಬೆನ್ನಲ್ಲೇ ಈ ಭೇಟಿ ನಡೆದಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ದಿನವಷ್ಟೇ ಜಮೀರ್ ಅಹಮದ್ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಜಮೀರ್ ಅವರು ಸಮುದಾಯದ ಪ್ರಭಾವಿ ಮುಖಂಡರಾಗಿದ್ದಾರೆ, ಹೀಗಾಗಿ ಎರಡನೇ ಹಂತದ ಸಂಪುಟ ರಚನೆಯಲ್ಲಿ ಅವರಿಗೆ ಸಚಿವ ಸ್ಥಾನ ಕಲ್ಪಿಸುವ ಸಂಬಂಧ ಪಕ್ಷದ ವರಿಷ್ಠರ ಮನವೊಲಿಸಬೇಕು ಎಂದು ಕೋರಿದ್ದರು. ಈ ಸಂದರ್ಭದಲ್ಲಿ ಬೆಂಬಲಿಗರೊಬ್ಬರು, "ಸರ್, ಜಮೀರ್ ನಿಮ್ಮ ಪರಮಾಪ್ತರು ಅಲ್ಲವೇ?" ಎಂದು ಪ್ರಶ್ನಿಸಿದಾಗ, ಸಿದ್ದರಾಮಯ್ಯ ಅವರು, "ಅದಕ್ಕೆ ನನ್ನ ವಿರುದ್ಧವೇ ಕೆಲಸ ಮಾಡುವುದೇ?" ಎಂದು ಆತ್ಮೀಯವಾಗಿಯೇ ಗದರಿದ್ದರು. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು.
ಈ ಬೆಳವಣಿಗೆಯಿಂದ ಎಚ್ಚೆತ್ತ ಮಾಜಿ ಸಚಿವ ಜಮೀರ್ ಅಹಮದ್, ಗುರುವಾರ ರಾತ್ರಿಯೇ ಸಿದ್ದರಾಮಯ್ಯ ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಒಂದು ತಾಸಿನ ಮಾತುಕತೆ ವೇಳೆ, ತಮ್ಮ ವಿರುದ್ಧ ಸಿದ್ದರಾಮಯ್ಯ ಅವರಿಗಿರುವ ಅಸಮಾಧಾನ ಹಾಗೂ ಅದಕ್ಕೆ ಕಾರಣಗಳ ಬಗ್ಗೆ ಚರ್ಚಿಸಿ, ಗೊಂದಲಗಳನ್ನು ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ದೊರಕಿಸಿಕೊಡಲು ಹೈಕಮಾಂಡ್ ವರಿಷ್ಠರ ಮನವೊಲಿಸುವಂತೆ ಸಿದ್ದರಾಮಯ್ಯ ಅವರಿಗೆ ಜಮೀರ್ ಅಹಮದ್ ಮನವಿ ಮಾಡಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಭಿನ್ನಾಭಿಪ್ರಾಯದ ವಿಡಿಯೋ ವೈರಲ್ ಆದ ಮರುದಿನವೇ ಈ ಇಬ್ಬರು ನಾಯಕರು ಮುಖಾಮುಖಿಯಾಗಿ ಮಾತುಕತೆ ನಡೆಸಿರುವುದು ಸದ್ಯದ ರಾಜಕೀಯ ವಲಯದಲ್ಲಿ ಹಲವು ಜಿಜ್ಞಾಸೆಗಳಿಗೆ ಎಡೆಮಾಡಿಕೊಟ್ಟಿದೆ.